ಇತ್ತೀಚೆಗಷ್ಟೇ ಆರ್ ಬಿಐ (RBI) 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂದಕ್ಕೆ ಪಡೆಯುವ ಆದೇಶ ಪ್ರಕಟಿಸಿದೆ. ಇದರ ಬೆನ್ನಲ್ಲಿಯೇ ಜನರು ಚಿನ್ನಾಭರಣ (Gold, Silver) ಖರೀದಿಸಲು ಮುಗಿಬಿದ್ದಿದ್ದಾರೆ.
ದೇಶಾದ್ಯಂತ ಜುವೆಲ್ಲರಿ ಅಂಗಡಿಗಳಲ್ಲಿ (Jewellery Shop) ಭರ್ಜರಿ ವ್ಯಾಪಾರ ನಡೆದಿದೆ. ಜನರು ಚಿನ್ನವನ್ನು ದುಬಾರಿ ಬೆಲೆ ನೀಡಿ ಖರೀದಿಸುತ್ತಿರುವುದು ವಿಶೇಷವಾಗಿದೆ. ಜೈಪುರದಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 63 ಸಾವಿ ರೂ. ಇದ್ದರೂ ಗ್ರಾಹಕರು 66 ಸಾವಿರ ರೂ. ನೀಡಿ ಖರೀದಿಸಿದ್ದಾರೆ. ಹೀಗಾಗಿ 2 ಸಾವಿರ ರೂ. ಬ್ಯಾನ್ ಮಾಡಿದ ಹಿನ್ನೆಲೆಯಲ್ಲಿ ದೇಶಾದ್ಯಂತ 10% ರಿಂದ 20% ರಷ್ಟು ಆಭರಣ ವ್ಯಾಪಾರ ಹೆಚ್ಚಾಗಿದೆ. ಸಾಧಾರಣವಾಗಿ ಅಕ್ಷಯ ತೃತೀಯಾ ಅಥವಾ ಹಬ್ಬದ ಸಮಯದಲ್ಲಿ ಹೆಚ್ಚಾಗಿ ಚಿನ್ನ ಖರೀದಿ ನಡೆಯುತ್ತಿರುತ್ತದೆ.
ಪೆಟ್ರೋಲ್ ಪಂಪ್ ನಲ್ಲಿ 2 ಸಾವಿರ ರೂ. ಚಲಾವಣೆ ಬಹಳ ವಿರಳ. ಆದರೆ ಈಗ ಹಲವಾರು ಜನರು 2000 ರೂ. ನೀಡಿ ಪೆಟ್ರೋಲ್ ಹಾಕಿಸುತ್ತಿದ್ದಾರೆ ಎಂದು ಕೋಲ್ಕತ್ತಾ ಮೂಲದ ಪೆಟ್ರೋಲ್ ಪಂಪ್ ಉದ್ಯೋಗಿ ತಿಳಿಸಿದ್ದಾರೆ.
2016ರ ನವೆಂಬರ್ 8 ರಂದು 500, 1000 ರೂ. ಮುಖಬೆಲೆಯ ನೋಟು ನಿಷೇಧದ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯ ಗ್ರಾಹಕರು ಚಿನ್ನವನ್ನು ಖರೀದಿ ಮಾಡಿದ್ದರು. ಈ ಕಾರಣಕ್ಕೆ ಆದಾಯ ತೆರಿಗೆ ಇಲಾಖೆ ಹಲವು ಜ್ಯುವೆಲ್ಲರಿ ಅಂಗಡಿಗಳಿಗೆ ನೊಟೀಸ್ ಜಾರಿ ಮಾಡಿ ಗ್ರಾಹಕರ ವಿವರ ಕೇಳಿತ್ತು. ಈ ಕಾರಣಕ್ಕೆ ಈ ಬಾರಿ ಜ್ಯುವೆಲ್ಲರಿಗಳು 2000 ರೂ. ಮುಖಬೆಲೆಯ ನೋಟುಗಳನ್ನು ನೀಡಿ ಆಭರಣ ಖರೀದಿಸುವ ಗ್ರಾಹಕರ ಎಲ್ಲಾ ವಿವರಗಳನ್ನು ಸಂಗ್ರಹಿಸುತ್ತಿದೆ.