ಶಿವರಾಜ್ ಕುಮಾರ್ (Shivarajkumar) ಅವರು ‘ವೇದ’ (Vedha) ಚಿತ್ರದ ಯಶಸ್ಸಿನ ನಂತರ ಕನ್ನಡ- ತಮಿಳು ಸಿನಿಮಾಗಳಲ್ಲಿ ಸಖತ್ ಬ್ಯೂಸಿಯಾಗಿದ್ದಾರೆ. ಆದರೆ, ಈಗ ‘ಬೈರತಿ ರಣಗಲ್’ (Bhairathi Rangal) ಸಿನಿಮಾ ಶೂಟಿಂಗ್ ಯಾವಾಗ? ಶಿವಣ್ಣ ಜೋಡಿಯಾಗೋ ಆ ಲಕ್ಕಿ ನಟಿ ಯಾರು.? ಎಂಬ ಕುರಿತು ಮಾಹಿತಿ ಇದೆ ನೋಡಿ.

ನರ್ತನ್ ನಿರ್ದೇಶನದ ‘ಮಫ್ತಿ’ (Mufti) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈ ಚಿತ್ರದ ಪ್ರೀಕ್ವೆಲ್‌ಗೆ ಸಿದ್ಧತೆ ಭರದಿಂದ ಸಾಗುತ್ತಿದೆ. 5 ವರ್ಷಗಳ ನಂತರ ಈ ಚಿತ್ರದ ಮೂಲಕ ಮತ್ತೆ ನರ್ತನ್- ಶಿವಣ್ಣ ಕಾಂಬೋ ಒಂದಾಗುತ್ತಿದೆ. ‘ಮಫ್ತಿ’ ಚಿತ್ರದಲ್ಲಿ ಮಾಫಿಯಾ ಡಾನ್ ‘ಬೈರತಿ ರಣಗಲ್ ಅವತಾರದಲ್ಲಿ ಶಿವಣ್ಣ ಅಬ್ಬರಿಸಿದ್ದರು. ರಾಕ್ಷಸನಂತಹ ಪಾತ್ರ ಕುತೂಹಲ ಕೆರಳಿಸಿತ್ತು. ಆದರೆ ಆತ ನಿಜಕ್ಕೂ ಅಷ್ಟು ಕ್ರೂರಿ ಆಗಿದ್ದು ಯಾಕೆ? ಆತನ ಹಿನ್ನೆಲೆ ಏನು ಎನ್ನುವ ಕಥೆ ಈ ಭಾಗದಲ್ಲಿ ರಿವೀಲ್ ಆಗಲಿದೆ.

ನಾಯಕಿ (Heroine) ಸಿಕ್ಕಿದ ಕೂಡಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.ನಾಯಕಿಯ ಹುಡುಕಾಟ ನಡೆಸುತ್ತಿರುವ ಚಿತ್ರತಂಡ, ಮತ್ತೊಂದು ಕಡೆ ಚಿತ್ರೀಕರಣಕ್ಕೆ ಬೇಕಾದ ತಯಾರಿ ಆರಂಭಿಸಿದೆ. ಜೂನ್ 16ರಿಂದ ಶೂಟಿಂಗ್ ಶುರುವಾಗುವ ಸಾಧ್ಯತೆಯಿದೆ ಎಂದು ನರ್ತನ್ ಮಾಹಿತಿ ನೀಡಿದ್ದಾರೆ. ‘ವೇದ’ (Vedha) ಸಿನಿಮಾ ಗೆದ್ದಿರುವ ಗೀತಾ ಶಿವರಾಜ್‌ಕುಮಾರ್ ‘ಬೈರತಿ ರಣಗಲ್’ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ.