ರಾಯಚೂರು: ಪತ್ನಿ ತಂಬಾಕು ಕೇಳಿದ್ದಕ್ಕೆ ಉಂಟಾದ ಜಗಳದಿಂದ ಬೇಸತ್ತು ತಂದೆ ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆ ಹಾರಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮುದಕಪ್ಪ (60), ಶಿವು (23), ಬಸವರಾಜ್ (20) ಸಾವನ್ನಪ್ಪಿದ್ದರು. ಶಿವು ಇತ್ತೀಚೆಗೆ ಪ್ರೀತಿಸಿ ಮದುವೆಯಾಗಿದ್ದ. ಈತನ ಪತ್ನಿ ತಂಬಾಕು ಕೇಳಿದ್ದಕ್ಕೆ ಮನೆಯಲ್ಲಿ ಜಗಳ ಆರಂಭವಾಗಿದೆ.
ಕುಟುಂಬಸ್ಥರ ಎದುರೇ ಶಿವು ಪತ್ನಿ ಮಾಯಮ್ಮ ತಂಬಾಕು ಕೇಳಿದ್ದಾಳೆ. ಇದರಿಂದ ಇರಿಸು ಮುರಿಸು ಉಂಟಾಗಿ ಶಿವು ಪತ್ನಿಗೆ ಹೊಡೆದಿದ್ದಾನೆ. ಕೋಪಗೊಂಡ ಮಾಯಮ್ಮ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಮಾವ ಮುದುಕಪ್ಪ, ಕರೆಗೆ ಹಾರಿ ಮಾಯಮ್ಮಳನ್ನು ರಕ್ಷಿಸಿ ಮೇಲಕ್ಕೆ ತಂದಿದ್ದರು. ಆದರೂ ಮತ್ತೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೂ ಮುದುಕಪ್ಪ ಆಕೆಯನ್ನು ರಕ್ಷಿಸಿದ್ದಾರೆ. ಇದನ್ನು ನೋಡಲಾರದೆ ಶಿವು ಕೆರೆಗೆ ಹಾರಿದ್ದಾನೆ. ಈ ಸಂದರ್ಭದಲ್ಲಿ ಈಜು ಬಾರದ ಸಹೋದರ ಬಸವರಾಜ್, ಶಿವು ರಕ್ಷಣೆಗಾಗಿ ಕೆರೆಗೆ ಹಾರಿದ್ದಾನೆ. ಮೇಲೆ ಬರಲಾಗದೆ ಒದ್ದಾಡುತ್ತಿರುವುದನ್ನು ಕಂಡು ತಂದೆ ಮುದುಕಪ್ಪ ವಂಶದ ಕುಡಿಗಳನ್ನು ಕಾಪಾಡಲು ಕೆರೆಗೆ ಹಾರಿದ್ದಾರೆ. ಈಜು ಬಾರದ ಮಕ್ಕಳು ತಂದೆಯನ್ನು ಬಿಗಿಯಾಗಿ ಹಿಡಿದುಕೊಂಡ ಹಿನ್ನೆಲೆಯಲ್ಲಿ ಎಲ್ಲರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.