ಎಂಎಸ್ ಧೋನಿ ಅವರು ತಾವಾಗಿಯೇ ಐಪಿಎಲ್ ನಿವೃತ್ತಿ ಕುರಿತು ಮಾತನಾಡದೆ ಇದ್ದರೂ ಆ ಪ್ರಶ್ನೆಗಳನ್ನು ಮಾಧ್ಯಮ ಸೇರಿದಂತೆ ಹಲವು ಕೇಳುತ್ತಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಬಳಿಕ ಎಂಎಸ್ ಧೋನಿಗೆ ಮತ್ತೊಮ್ಮೆ ನಿವೃತ್ತಿ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಸಿಎಸ್ಕೆ ನಾಯಕ ಖಡಕ್ ಉತ್ತರ ನೀಡಿದ್ದಾರೆ.
ಟೈನಟ್ಸ್ ವಿರುದ್ಧ 15 ರನ್ಗಳಿಂದ ಮೊದಲನೇ ಕ್ವಾಲಿಫೈಯರ್ ಪಂದ್ಯ ಗೆದ್ದ ಚೆನ್ನೈ ಸೂಪರ್ ಕಿಂಗ್ಸ, 10ನೇ ಬಾರಿ ಐಪಿಎಲ್ ಟೂರ್ನಿಯಲ್ಲಿ ಫೈನಲ್ ತಲುಪಿತು. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಎಂಎಸ್ ಧೋನಿ, ಸದ್ಯಕ್ಕೆ ಐಪಿಎಲ್ ನಿವೃತ್ತಿ ಬಗ್ಗೆ ನಿರ್ಧಾರ ತಗೆದುಕೊಳ್ಳುವುದಿಲ್ಲ. 2024ರ ಐಪಿಎಲ್ ಮಿನಿ ಹರಾಜು ಡಿಸೆಂಬರ್ನಲ್ಲಿ ನಡೆಯಲಿದೆ. ಇದರ ಒಳಗೆ ನನ್ನ ಫಿಟ್ನೆಸ್ ನೋಡಿಕೊಂಡು ಈ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ನಿವೃತ್ತಿ ಬಗ್ಗೆ ನನಗೆ ಗೊತ್ತಿಲ್ಲ. ಈ ಕುರಿತು ನಿರ್ಧಾರ ತೆಗೆದುಕೊಳ್ಳಲು 8-9 ತಿಂಗಳು ಅವಕಾಶವಿದೆ. ಡಿಸೆಂಬರ್ ವೇಳೆ ಮಿನಿ ಹರಾಜು ನಡೆಯಲಿದೆ. ಈಗ ಏಕೆ ನಾನು ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು? ಇದರ ಬಗ್ಗೆ ನಿರ್ಧರಿಸಲು ಇನ್ನೂ ಹೆಚ್ಚಿನ ಸಮಯವಿದೆ. ಆದರೆ, ಆಟಗಾರನಾಗಿ ಅಥವಾ ಬೇರೆ ಜವಾಬ್ದಾರಿಯ ಮೂಲಕವಾದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆ ನಾನು ಯವಾಗಲೂ ಇದ್ದೇ ಇರುತ್ತೇನೆ ಎಂದು ಹೇಳಿದ್ದಾರೆ.