ಬರೋಬ್ಬರಿ 40 ಮೊಸಳೆಗಳಿಗೆ ಒಬ್ಬ ಮನುಷ್ಯ ಸಿಕ್ಕರೆ ಏನಾಗಬಹುದು? ಅಬ್ಬಾ ಇದನ್ನು ಊಹಿಸುವುದೇ ಜೀವ ಹೋದಂತೆ ಆಗುತ್ತದೆ. ಆದರೆ, 72 ವರ್ಷದ ವೃದ್ಧರೊಬ್ಬರನ್ನು ಇಷ್ಟೊಂದು ಸಂಖ್ಯೆಯ ಮೊಸಳೆಗಳು ತಿಂದು ತೇಗಿವೆ.
ಈ ಘಟನೆ ಕಾಂಬೋಡಿಯಾದಲ್ಲಿ ಬೆಳಕಿಗೆ ಬಂದಿದೆ. ಸಾವನ್ನಪ್ಪಿದ ವೃದ್ಧನ ಕುಟುಂಬಸ್ಥರು ಮೊಸಳೆ ಸಾಕಾಣಿಕೆ ಮಾಡುತ್ತಿದ್ದಾರೆ. ಮೊಸಳೆ (Crocodile) ಗಳನ್ನು ಕೂಡಿ ಹಾಕುವ ಪಂಜರದ ಒಳಗೆ ವೃದ್ಧ ಆಯತಪ್ಪಿ ಬಿದ್ದಿದ್ದರಿಂದ ಈ ಅನಾಹುತ ಸಂಭವಿಸಿದೆ.
ಮೊಟ್ಟೆ ಇರಿಸಿದ್ದ ಮೊಸಳೆಯನ್ನು ಹೊರಗೆ ಕಳುಹಿಸಲು ವೃದ್ಧ ಲುವಾನ್ ನಾಮ್ ಯತ್ನಿಸುತ್ತಿದ್ದರು. ಕೋಲಿನಿಂದ ಮೊಸಳೆಯನ್ನು ಬೆದರಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಮೊಸಳೆ ಕೋಲನ್ನು ಗಟ್ಟಿಯಾಗಿ ಕಚ್ಚಿ ಹಿಡಿದು ಬಲವಾಗಿ ಎಳೆದಿದೆ. ಇದರಿಂದ ಆ ವೃದ್ಧ ಕೋಲಿನ ಸಮೇತ ಮೊಸಳೆಗಳ ವಾಸಸ್ಥಳದೊಳಗೆ ಬಿದ್ದಿದ್ದಾರೆ. ಆಗ ಅಲ್ಲಿದ್ದ ಮೊಸಳೆಗಳ ಹಿಂಡು ಅವರ ಮೇಲೆ ದಾಳಿ ನಡೆಸಿದ್ದು, ವೃದ್ಧನ ದೇಹವನ್ನು ಛಿದ್ರಗೊಳಿಸಿ ತಿಂದು ಹಾಕಿವೆ.
ಮೊಟ್ಟೆ ಇರಿಸಿದ್ದ ಪಂಜರದಿಂದ ಮೊಸಳೆಯನ್ನು ಹೊರಗೆ ಓಡಿಸುತ್ತಿದ್ದಾಗ, ಮೊಸಳೆಯು ಕೋಲಿನ ಮೇಲೆ ದಾಳಿ ನಡೆಸಿದೆ. ಇದರಿಂದ ಆಯ ತಪ್ಪಿದ ಅವರು ಆವರಣದ ಒಳಗೆ ಬಿದ್ದಿದ್ದಾರೆ. ಬಳಿಕ ಇತರೆ ಮೊಸಳೆಗಳು ಅವರು ಬಿದ್ದ ಜಾಗದತ್ತ ನುಗ್ಗಿವೆ. ಪರಿಣಾಮ ಅವರಿಗೆ ಅಲ್ಲಿಂದ ಪಾರಾಗಲು ಸಾಧ್ಯವಾಗದಂತೆ ದಾಳಿ ನಡೆಸಿದವು. ವೃದ್ಧನ ಕೈಗಳನ್ನು ಕಚ್ಚಿ ಎಳೆದ ಮೊಸಳೆಗಳು ಒಂದು ಕೈಯನ್ನು ನುಂಗಿವೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.