Hyderabad : ಪತಿ ಅಮೆರಿಕದಲ್ಲಿ ಹಾಗೂ ಪತ್ನಿ ಭಾರತದಲ್ಲಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ.
ಭಾರತದಲ್ಲಿ ಸಾಹಿತಿ (29) ಸಾವನ್ನಪ್ಪಿದ್ದರೆ, ಮನೋಜ್(31) ಅಮೆರಿಕದಲ್ಲಿ ಸಾವನ್ನಪ್ಪಿರುವ ಪತಿಯಾಗಿದ್ದಾರೆ. ಸಾಹಿತಿಯು ಹೈದರಾಬಾದ್ ನ ಅಂಬರಪೇಟೆಯ ಡಿಡಿ ಕಾಲನಿ ನಿವಾಸಿಯಾಗಿದ್ದು, ಕಳೆದ, ಒಂದೂವರೆ ವರ್ಷದ ಹಿಂದೆ ವನಸ್ಥಳಿಪುರಂ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಮನೋಜ್ ರನ್ನು ಮದುವೆಯಾಗಿದ್ದರು. ಮದುವೆ ಬಳಿಕ ಇಬ್ಬರು ಅಮೆರಿಕದ ದಲ್ಲಾಸ್ನಲ್ಲಿ ನೆಲೆಸಿದ್ದರು.
ಸಾಹಿತಿ ತನ್ನ ಪಾಲಕರನ್ನು ನೋಡಲೆಂದು ಈ ತಿಂಗಳು ಅಮೆರಿಕದಿಂದ ಬಂದಿದ್ದರು. ಮನೋಜ್ ಮಾತ್ರ ಅಮೆರಿಕದಲ್ಲೇ ಉಳಿದಿದ್ದ. ಇದೇ ತಿಂಗಳು 20ರಂದು ಮನೋಜ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೇ 23ರಂದು ಆತನ ಮೃತದೇಹವನ್ನು ಅಮೆರಿಕದಿಂದ ವನಸ್ಥಳಿಪುರಂಗೆ ತರಿಸಿಕೊಳ್ಳಲಾಯಿತು. ಮೇ 24ರಂದು ಗಂಡನ ಅಂತ್ಯಕ್ರಿಯೆ ಮುಗಿಸಿ, ಅದೇ ದಿನ ರಾತ್ರಿ ತನ್ನ ಪಾಲಕರ ಮನೆಗೆ ಸಾಹಿತಿ ಹೋಗಿದ್ದರು. ಅಲ್ಲಿ ತನ್ನ ಸಹೋದರಿಯೊಂದಿಗೆ ಕೋಣೆಯಲ್ಲಿ ಮಲಗಿದ್ದರು.
ಆದರೆ, ಬೆಳಿಗ್ಗೆ ಸಹೋದರಿ ವಾಶ್ ರೂಮ್ ಗೆ ಹೋದಾಗ, ರೂಮ್ ಲಾಕ್ ಮಾಡಿಕೊಂಡು ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ರೂಮಿನ ಬಾಗಿಲು ಒಡೆದು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದಾಳೆಂದು ವೈದ್ಯರು ಖಚಿತ ಪಡಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.