Bangalore: ಸಿದ್ದರಾಮಯ್ಯ (Siddarmaiah) ಸರ್ಕಾರದ ಸಂಪುಟ ಸೇರಲು ಹಲವಾರು ಆಕಾಂಕ್ಷಿಗಳು ಪ್ರಯತ್ನಿಸಿದ್ದರು. ಕೊನೆಗೂ ಸಂಪುಟ ರಚನೆಯಾಗಿದ್ದು, ಹಲವು ಹಿರಿಯರಿಗೆ ಅವಕಾಶ ನೀಡಿಲ್ಲ. ಈ ನಿಟ್ಟಿನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕೆಲ ಶಾಸಕರು ಹೈಕಮಾಂಡ್ ನಡೆಗೆ ತೀವ್ರ ಅಸಮಾಧಾನಗೊಂಡಿದ್ದಾರೆ. ವಿಧಾನಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್(BK Hariprasad) ಮುನಿಸಿಕೊಂಡಿದ್ದು, ಸಚಿವ ಸ್ಥಾನ ಕೈ ತಪ್ಪಿದಕ್ಕೆ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾಗಿದ್ದ ಬಿ.ಕೆ ಹರಿಪ್ರಸಾದ್, 16 ವಿವಿಧ ರಾಜ್ಯಗಳಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ, ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ವಿರುದ್ಧ ಸೈದ್ಧಾಂತಿಕವಾಗಿ ತೀವ್ರ ವಾಗ್ದಾಳಿ ನಡೆಸುತ್ತಿದ್ದ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಕೊನೆ ಕ್ಷಣದಲ್ಲಿ ಬದಲಾಗಿದ್ದರಿಂದ ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಪಕ್ಷದ ಕೆಲವರ ನಡೆಯಿಂದ ಅಸಮಾಧಾನಗೊಂಡು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಬಿಕೆ ಹರಿಪ್ರಸಾದ್ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬಣದಲ್ಲಿ ಗುರುಸಿಕೊಂಡಿದ್ದು, ಅವರಿಗೆ ಸಚಿವ ಸ್ಥಾನ ಕೊಡಿಸಲು ಡಿಕೆ ಶಿವಕುಮಾರ್ ಸಹ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದರೆ, ಇದಕ್ಕೆ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಹರಿಪ್ರಸಾದ್ ಅವರಿಗೆ ಮಂತ್ರಿಭಾಗ್ಯ ಸಿಕ್ಕಿಲ್ಲ ಎನ್ನಲಾಗಿದೆ.