ಹಾಸನ : ಮಹಿಳಾ ಸಬ್ ಇನ್ಸ್ ಪೆಕ್ಟರ್ ಮನೆಗೆ ದುಷ್ಕರ್ಮಿಗಳು ಬೆಂಕಿ (Fire) ಹಚ್ಚಿರುವ ಘಟನೆ ಹಾಸನ (Hassan) ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ನಡೆದಿದೆ.
ಕೊಣನೂರು ಪೊಲೀಸ್ ಠಾಣೆ ಪಿಎಸ್ಐ (PSI) ಶೋಭಾ ಭರಮಕ್ಕನವರ್ ಅವರು ರಜೆಯ ಮೇಲೆ ಊರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಬಾಡಿಗೆ ಮನೆಯ ಕಿಟಕಿ ಒಡೆದು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.
ಮನೆಯಲ್ಲಿದ್ದ ಲ್ಯಾಪ್ ಟಾಪ್, ಡ್ರೆಸ್ಸಿಂಗ್ ಟೇಬಲ್, ಬಟ್ಟೆ, ಪೀಠೋಪಕಣಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಶೋಭಾ ಅವರು ರಜೆ ಮುಗಿಸಿ ಮರಳಿ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು, ಡಿವೈಎಸ್ಪಿ ಮುರುಳೀಧರ್ ಹಾಗೂ ವೃತ್ತ ನಿರೀಕ್ಷಕ ರಘುಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಮಹಿಳಾ ಅಧಿಕಾರಿ ಕಳೆದ ಒಂದೂವರೆ ತಿಂಗಳ ಹಿಂದೆಯ,ಟೇ ಜಾವಗಲ್ ಪೊಲೀಸ್ ಠಾಣೆಯಿಂದ ಕೊಣನೂರು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಘಟನೆ ಬಗ್ಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದುಷ್ಕರ್ಮಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.