NewDelhi : ನಾಳೆ ದೇಶದ ಹೊಸ ಸಂಸತ್ ಉದ್ಘಾಟನೆಯಾಗಲಿದೆ. (New Parliament Building) ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಲೋಕಾರ್ಪಣೆ ಮಾಡಲಿದ್ದಾರೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಭರಪೂರದಿಂದ ನಡೆದಿವೆ. ಈ ಕಟ್ಟಡವು ಅಂದಾಜು 1,200 ಕೋಟಿ ರೂ. ವೆಚ್ಚದಲ್ಲಿ ನೂತನ ಸಂಸತ್ ಭವನ ನಿರ್ಮಾಣವಾಗಿದೆ.
ಇದರ ವೀಡಿಯೋವನ್ನು ಶುಕ್ರವಾರ ಸಂಜೆ ಪ್ರಧಾನಿ ಮೋದಿ ಟ್ವೀಟ್ ಮೂಲಕ ಅನಾವರಣ ಮಾಡಿದ್ದರು. 2020ರ ಡಿಸೆಂಬರ್ 10ರಂದು ಪ್ರಧಾನಿ ಭೂಮಿಪೂಜೆ ನೆರವೇರಿಸಿದ್ದರು. ಸದ್ಯ ನೂತನ ಸಂಸತ್ ಭವನದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. 96 ವರ್ಷದಷ್ಟು ಹಳೆಯದಾದ ಸಂಸತ್ ಭವನ ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಇಲ್ಲದ ಹಿನ್ನೆಲೆಯಲ್ಲಿ ಹೊಸ ಸಂಸತ್ ಭವನದ ಅಗತ್ಯ ಬಿದ್ದಿತ್ತು. ಹಳೆಯ ಸಂಸತ್ ಭವನದ ಪಕ್ಕದಲ್ಲೇ ಹೊಸ ಭವನವನ್ನು ಎರಡೂವರೆ ವರ್ಷದಲ್ಲಿ ಅದ್ಭುತವಾಗಿ ನಿರ್ಮಿಸಲಾಗಿದೆ.
ತ್ರಿಕೋನ ಆಕಾರದ ನಾಲ್ಕು ಅಂತಸ್ತಿನ ಕಟ್ಟಡದ ವಿಸ್ತೀರ್ಣ 64,500 ಚದರ ಮೀಟರ್ ಇದೆ. ಹೊಸ ಸಂಸತ್ ಭವನದಲ್ಲಿ 888 ಲೋಕಸಭಾ ಸದಸ್ಯರು ಮತ್ತು 384 ರಾಜ್ಯ ಸಭಾ ಸದಸ್ಯರು ಸೇರಿದಂತೆ ಒಟ್ಟು 1,280 ಸಂಸದರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಜ್ಞಾನದ್ವಾರ, ಶಕ್ತಿದ್ವಾರ ಹಾಗೂ ಕರ್ಮದ್ವಾರ ಎಂಬ ಮೂರು ಪ್ರಮುಖ ದ್ವಾರಗಳ ನಿರ್ಮಾಣ, ಸಂಸದರು, ವಿಐಪಿ ಸಂದರ್ಶಕರು ಹಾಗೂ ಅಧಿಕಾರಿಗಳಿಗಾಗಿ ಪ್ರತ್ಯೇಕ ದ್ವಾರ ಅಳವಡಿಸಲಾಗಿದೆ.
ಭವನದ ಮೇಲೆ ರಾಷ್ಟ್ರೀಯ ಲಾಂಛನದ ಕಂಚಿನ ಪ್ರತಿರೂಪವಿದೆ. ಅಂದಾಜು 9,500 ಕೆ.ಜಿ, 6.5 ಮೀಟರ್ ಎತ್ತರ. ಕೋನಾರ್ಕ್ನ ಸೂರ್ಯ ದೇವಾಲಯದ ಚಕ್ರದ ಮಾದರಿಯೊಂದಿಗೆ ಬಹುಮುಖಿ ಕೌಟಿಲ್ಯನ ಭಾವಚಿತ್ರವನ್ನು ಕಟ್ಟಡದಲ್ಲಿ ಅಳವಡಿಸಲಾಗಿದೆ. ಮೂಲ ಸಂವಿಧಾನದ ಪ್ರತಿಯನ್ನು ಸಭಾಂಗಣದಲ್ಲಿ ಇಡಲಾಗಿದೆ. ಗ್ರಂಥಾಲಯ, ಬಹು ಸಮಿತಿ ಕೊಠಡಿಗಳು ಮತ್ತು ಊಟದ ಕೋಣೆಗಳನ್ನು ಸಹ ಹೊಂದಿದೆ. ಕಟ್ಟಡವು ಲೋಕಸಭಾ, ರಾಜ್ಯಸಭಾ, ಕೇಂದ್ರೀಯ ಹಾಲ್ ಮತ್ತು ಅಧಿಕಾರಿಗಳ ಕಚೇರಿಗಳನ್ನು ಒಳಗೊಂಡಿದೆ. ಲೋಕಸಭೆಯು ಭಾರತದ ರಾಷ್ಟ್ರೀಯ ಪಕ್ಷಿ ನವಿಲಿನ ಹಾಗೆ ವಿನ್ಯಾಸಗೊಳಿಸಲಾಗಿದೆ. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸುಭಾಸ್ ಚಂದ್ರ ಬೋಸ್ ಮತ್ತು ದೇಶದ ಪ್ರಧಾನ ಮಂತ್ರಿಗಳ ಭಾವಚಿತ್ರಗಳನ್ನು ಹಾಕಲಾಗಿದೆ.