Bangalore : ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರದ(Congress Government) ಸಂಪುಟ ವಿಸ್ತರಣೆಯಾಗಿದೆ (Karnataka Cabinet expansion). ಎರಡನೇ ಹಂತದಲ್ಲಿ 24 ಶಾಸಕರು ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಒಟ್ಟು 34 ಜನರ ಸಂಪುಟ ರಚನೆಯಾಗಿದೆ. ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆಗೆ ಒತ್ತು ನೀಡಿ ಕಾಂಗ್ರೆಸ್ ಹೈಕಮಾಂಡ್ ಸಚಿವರ ಪಟ್ಟಿ ಬಿಡುಗಡೆ ಮಾಡಿದೆ.
ಹಳಬರು ಹಾಗೂ ಹೊಸಬರ ತಂಡ ಸಿದ್ಧವಾಗಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ ಹಲವು ಜಿಲ್ಲೆಗಳಿಗೆ ಮಂತ್ರಿ ಭಾಗ್ಯ ಸಿಕ್ಕರೆ, ಹಲವು ಜಿಲ್ಲೆಗಳ ಶಾಸಕರಿಗೆ ಮಂತ್ರಿ ಭಾಗ್ಯ ಕೂಡ ಸಿಕ್ಕಿಲ್ಲ. ಬೆಂಗಳೂರು ನಗರ ಜಿಲ್ಲೆಗೆ ಆರು ಸಚಿವ ಸ್ಥಾನ ಸಿಕ್ಕಿದ್ದು, ಮೈಸೂರು ಜಿಲ್ಲೆಗೆ ಮೂರು. ಸಿದ್ದರಾಮಯ್ಯ ಜತೆಗೆ ಡಾ. ಹೆಚ್.ಸಿ. ಮಹಾದೇವಪ್ಪ, ಕೆ.ವೆಂಕಟೇಶ್ ಅವರಿಗೆ ಮಂತ್ರಿಭಾಗ್ಯ ಸಿಕ್ಕಿದೆ. ತುಮಕೂರು- (ಕೆಎನ್ ರಾಜಣ್ಣ, ಡಾ ಜಿ ಪರಮೇಶ್ವರ್) ವಿಜಯಪುರ-(ಶಿವಾನಂದ್ ಪಾಟೀಲ್, ಎಂಬಿ ಪಾಟೀಲ್), ಕಲಬುರಗಿ-(ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್), ಬೀದರ್-(ರಹೀಂ ಖಾನ್, ಈಶ್ವರ್ ಖಂಡ್ರೆ) ಮತ್ತು ಬೆಳಗಾವಿ( ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ) ಜಿಲ್ಲೆಗಳಿಗೆ ತಲಾ ಇಬ್ಬರಿಗೆ ಅವಕಾಶ ನೀಡಲಾಗಿದೆ.
16 ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಉಡುಪಿ(ಕಾಂಗ್ರೆಸ್ ಗೆಲ್ಲದ ಜಿಲ್ಲೆ), ಮಂಗಳೂರು (ಸ್ಪೀಕರ್ ಸ್ಥಾನ ಸಿಕ್ಕಿದೆ), ಚಿಕ್ಕಮಗಳೂರು, ಚಾಮರಾಜನಗರ (ಡೆಪ್ಯುಟಿ ಸ್ಪೀಕರ್-ಪುಟ್ಟರಂಗಶೆಟ್ಟಿ) ಕೊಡಗು, ಕೋಲಾರ, ಹಾವೇರಿ, ಬೆಂಗಳೂರು ಗ್ರಾಮಾಂತರ, ಹಾಸನ ಸೇರಿದಂತೆ ಕೆಲವು ಜಿಲ್ಲೆಗಳಿಗೆ ಮಂತ್ರಿ ಭಾಗ್ಯ ಸಿಕ್ಕಿಲ್ಲ.