ರಾಯಚೂರು: ಇತ್ತೀಚಿಗಷ್ಟೇ ಜಿಲ್ಲೆಯ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು(Contaminated Water) ಸೇವಿಸಿ ಓರ್ವ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮಾನತುಗೊಂಡಿದ್ದರು. ಸದ್ಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಮತ್ತೊಂದು ಗ್ರಾಮದಲ್ಲಿ ಕಲುಷಿತ ನೀರು ಕುಡಿದು 20 ಕ್ಕು ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ.
ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಗೊರೆಬಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗೊರೆಬಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 20ಕ್ಕೂ ಅಧಿಕ ಜನರು ಅಸ್ವಸ್ಥರಾಗಿದ್ದಾರೆ. ಹೊಟ್ಟೆ ನೋವು, ವಾಂತಿ, ಬೇಧಿಯಿಂದ ಜನರು ಬಳಲುತ್ತಿದ್ದಾರೆ. ಈ ಪೈಕಿ ಮೂವರಿಗೆ ಲಿಂಗಸುಗೂರು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದವರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೀರಿನ ಸ್ಯಾಂಪಲ್ಸ್ ಪಡೆದು ವೈದ್ಯರು ಪರೀಕ್ಷೆಗೆ ಕಳುಹಿಸಿದ್ದಾರೆ.