NewDelhi : ದೇಶ ಇಂದಿನಿಂದ ಹೊಸ ಯುಗಕ್ಕೆ ಕಾಲಿಟ್ಟಂತಾಗಿದೆ. ಏಕೆಂದರೆ ನೂತನ ಸಂಸತ್ ಭವನ (New Parliament) ಇಂದು ಉದ್ಘಾಟನೆಯಾಗಿದ್ದು, ದೇಶದ ಹಿರಿಮೆ ಹಾಗೂ ವಿಶ್ವಾಸದ ಸಂಕೇತವಾಗಿದೆ. ಈ ಐತಿಹಾಸಿಕ ಭವನ ಸಶಕ್ತ ದೇಶದ ಸಂಕೇತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ಸಂಸತ್ ಭವನ ಉದ್ಘಾಟನೆಯ ನಂತರ ಟ್ವೀಟ್ (Tweet) ಮಾಡಿದ ಪ್ರಧಾನಿ ಮೋದಿ, ದೇಶವನ್ನು ಹೊಸ ಅಭಿವೃದ್ಧಿ ಉತ್ತುಂಗಕ್ಕೆ ಉತ್ತೇಜಿಸಲಿದೆ. ಜನರ ಅಭಿನಂದನೆಗಳಿಗೆ ನಾನು ಆಭಾರಿಯಾಗಿದ್ದೇನೆ. ಈ ಪ್ರೀತಿಯೇ ನಮ್ಮ ಸಾಧನೆಗಳಿಗೆ ಪ್ರೇರಕ ಶಕ್ತಿ. ಜೊತೆಗೆ ಮತ್ತಷ್ಟು ಸಾಧಿಸಲು ನಮಗೆ ಶಕ್ತಿ ತುಂಬಲಿದೆ ಎಂದು ಬರೆದುಕೊಂಡಿದ್ದಾರೆ.
ಹೃದಯಗಳು ಮತ್ತು ಮನಸ್ಸುಗಳು ಹೆಮ್ಮೆ, ಆತ್ಮವಿಶ್ವಾಸ ಮತ್ತು ಭರವಸೆಯಿಂದ ತುಂಬಿವೆ. ಈ ಅಪ್ರತಿಮ ಕಟ್ಟಡವು ಸಬಲೀಕರಣದ ತೊಟ್ಟಿಲು ಆಗಿರಲಿ, ಕನಸುಗಳನ್ನು ಸೃಷ್ಟಿಸಿ ಮತ್ತು ಅವುಗಳನ್ನು ಈಡೇರಿಸುವಂತಾಗಲಿ. ಇದು ನಮ್ಮ ಮಹಾನ್ ರಾಷ್ಟ್ರವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಏರಿಸಲಿ ಎಂದು ಹೇಳಿದ್ದಾರೆ.
ಪೂಜಾ ವಿಧಿ-ವಿಧಾನಗಳಲ್ಲಿ ಭಾಗವಹಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ, ಐತಿಹಾಸಿಕ ಸೆಂಗೋಲ್ ಅನ್ನು ಲೋಕಸಭಾ ಸ್ಪೀಕರ್ ಸ್ಥಾನದ ಸಮೀಪದಲ್ಲಿ ಪ್ರತಿಷ್ಠಾಪಿಸಿ, ದೀಪ ಬೆಳಗಿಸಿದರು. ಮಂತ್ರ-ವಾದ್ಯ ಘೋಷ, ಮಂಗಳವಾದ್ಯಗಳಿಂದ ರಾಜದಂಡವನ್ನು ಪ್ರತಿಷ್ಠಾಪಿಸಲಾಯಿತು. ಈ ವೇಳೆ ಪ್ರಧಾನಿಯವರಿಗೆ ಲೋಕಸಬಾ ಸ್ಪೀಕರ್ ಓಂ ಬಿರ್ಲಾ ಸಾಥ್ ನೀಡಿದರು.