ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯ ಕೈ-ಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿ, ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆಯೊಂದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ಬೆಳಕಿಗೆ ಬಂದಿದೆ.
ಕಮಲಾ (82) ಕೊಲೆಯಾದ ದುರ್ದೈವಿ. ಶನಿವಾರ ಈ ಘಟನೆ ನಡೆದಿದ್ದು, ಕೊಲೆಯಾದ ಮಹಿಳೆಯ ಪತಿ ಕಳೆದ 6 ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಇದ್ದ ಮೂವರು ಮಕ್ಕಳು ತಾಯಿಯನ್ನು ಬಿಟ್ಟು ಬೇರೆಡೆ ವಾಸಿಸುತ್ತಿದ್ದರು. ಹೀಗಾಗಿ ಮನೆಯಲ್ಲಿ ಕಮಲಾ ಒಂಟಿಯಾಗಿದ್ದರು. ಸಂಜೆ 7 ಗಂಟೆ ಸುಮಾರಿಗೆ ನೆರೆ ಮನೆಯವರು ಕಮಲಾ ಅವರನ್ನು ಮಾತನಾಡಿಸಲು ಮನೆ ಬಳಿ ಬಂದಾಗ ಬಾಗಿಲು ತೆರೆದಿದ್ದಾರೆ. ನಂತರ ಒಳ ಹೋಗಿ ಕೈ-ಕಾಲು ಕಟ್ಟಿಬಾಯಿಗೆ ಪ್ಲಾಸ್ಟರ್ ಹಾಕಿದ್ದ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಮಲಾ ಪತ್ತೆಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ಮಾಡಿದಾಗ ಕಮಲಾ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಕೈ-ಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಕಮಲಾ ಮೈ ಮೇಲಿದ್ದ ಒಡವೆಗಳು ಸೇರಿದಂತೆ ಮನೆಯಲ್ಲಿದ್ದ ಒಡವೆಗಳನ್ನು ದೋಚಿದ್ದಾರೆ. ಸದ್ಯ ಏನೆಲ್ಲ ಕಳ್ಳತನವಾಗಿವೆ ಎಂಬುವುದರ ಮಾಹಿತಿ ಇಲ್ಲ. ಪರಿಚಿತರ ಕೈವಾಡವಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಸದ್ಯ ಈ ಕುರಿತು ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.