ನವದೆಹಲಿ : ನೂತನ ಸಂಸತ್ ಭವನದ (New Parliament Building) ಹೊರಗೆ ಪ್ರತಿಭಟನೆ ನಡೆಸಲು ತೆರಳುತ್ತಿದ್ದ ಕುಸ್ತಿಪಟುಗಳನ್ನು (Wrestlers) ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಮಾನುಷವಾಗಿ ಕುಸ್ತಿಪಟುಗಳನ್ನು ಬಂಧಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಲೈಂಗಿಕ ಆರೋಪ ಹೊರಿಸಿ ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಇಂದು ‘ಮಹಿಳಾ ಸಮ್ಮಾನ್ ಮಹಾಪಂಚಾಯತ್’ (Mahapanchayat) ಕರೆ ನೀಡಿದ್ದರು. ಅಲ್ಲದೇ, ಇಂದು ಸಂಸತ್ ಭವನದ ಮುಂದೆ ಪ್ರತಿಭಟಿಸಲು ಯೋಜಿಸಿದ್ದರು. ಅದಕ್ಕಾಗಿ ಮೆರವಣಿಗೆ ನಡೆದಿತ್ತು.

ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಬ್ಯಾರಿಕೇಡ್ ಹಾಕಿ ಕುಸ್ತಿಪಟುಗಳನ್ನು ತಡೆಯಲು ಪೊಲೀಸರು (Delhi Police) ಮುಂದಾದಾಗ, ಬ್ಯಾರಿಕೇಡ್ಗಳನ್ನ ಭೇದಿಸಲು ಪ್ರತಿಭಟನಾಕಾರರು ಮುಂದಾಗಿದ್ದರು. ಈ ಸಂದರ್ಭದಲ್ಲಿ ಗೊಂದಲ ಉಂಟಾಗಿತ್ತು. ಆಗ ಪೊಲೀಸರು ಕುಸ್ತಿಪಟುಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರತಿಭಟನಾ ನಿರತರನ್ನ ವಶಕ್ಕೆ ಪಡೆದಿದ್ದಾರೆ.

ತಮ್ಮ ಮೇಲೆ ದೌರ್ಜನ್ಯ ನಡೆಸಿರುವುದಾಗಿ ಆರೋಪಿಸಿರುವ ಕುಸ್ತಿಪಟು ಸಾಕ್ಷಿ ಮಲಿಕ್ ಕೆಲವು ಚಿತ್ರಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಯಾವುದೇ ಸರ್ಕಾರ ತಮ್ಮ ದೇಶದ ಚಾಂಪಿಯನ್ಗಳನ್ನು ಈ ರೀತಿ ನಡೆಸಿಕೊಳ್ಳುತ್ತದೆಯೇ? ನಾವು ಏನು ಅಪರಾಧ ಮಾಡಿದ್ದೀವಿ? ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಶೇಷ ಪೊಲೀಸ್ ಆಯುಕ್ತ ದೇಪೇಂದ್ರ ಪಾಠಕ್, ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘಿಸಿದ್ದಕ್ಕಾಗಿ ಕುಸ್ತಿಪಟುಗಳನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಆದರೆ, ಕುಸ್ತಿಪಟುಗಳ ಮೇಲಿನ ದೌರ್ಜನ್ಯಕ್ಕೆ ದೇಶದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

