ನವದೆಹಲಿ : ದೆಹಲಿಯ (Delhi) ರೋಹಿಣಿಯಲ್ಲಿ (Rohini) ಅಪ್ರಾಪ್ತೆಯ ಭಯಾನಕ ಕೊಲೆಯೊಂದು ನಡೆದಿದೆ.
16 ವರ್ಷದ ಹುಡುಗಿಯನ್ನು ಆಕೆಯ ಪ್ರಿಯಕರನೇ ಬರ್ಬರವಾಗಿ ಹತ್ಯೆ (Murder) ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಸಾಕ್ಷಿ (16) ಕೊಲೆಯಾದ ಹುಡುಗಿ. ಸಾಹಿಲ್ ಕೊಲೆ ಮಾಡಿದ ಆರೋಪಿ. ಸಾಹಿಲ್ ಹಾಗೂ ಸಾಕ್ಷಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಯಾವುದೇ ಕಾರಣಕ್ಕೆ ವೈಮನಸ್ಸು ಉಂಟಾದ ಹಿನ್ನೆಲೆಯಲ್ಲಿ ರೋಹಿಣಿಯ ಶಹಬಾದ್ ಡೈರಿ ಪ್ರದೇಶದಲ್ಲಿ ಸಾಹಿಲ್, ಸಾಕ್ಷಿಗೆ 20 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೇ, ಪಾಪಿಯು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಕ್ಷಿಯು ಸ್ನೇಹಿತೆಯ ಹುಟ್ಟು ಹಬ್ಬಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಸಾಹಿಲ್ ಆಕೆಯ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾನೆ. ಜನರ ಮಧ್ಯೆಯೇ ಈ ಘಟನೆ ನಡೆದಿದೆ ಎನ್ನಲಾಗಿದೆ. ಚಾಕುವಿನಿಂದ ಇರಿದು ಬಂಡೆ ಎತ್ತಿ ಹಾಕಿ ಕೊಲೆ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆರೋಪಿ ಪರಾರಿಯಾಗಿದ್ದು, ಸಾಹಿಲ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.