ಅಯೋಧ್ಯೆಯಲ್ಲಿ ರಾಮಮಂದಿರ ಕಾರ್ಯ ಅತ್ಯಂತ ವೇಗವಾಗಿ ಸಾಗುತ್ತಿದ್ದು, ಡಿಸೆಂಬರ್ ಒಳಗಾಗಿ ರಾಮಮಂದಿರದ ಗರ್ಭಗುಡಿ ನಿರ್ಮಾಣ ಮಾಡಿ ಬಾಲರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಪ್ರಯತ್ನಗಳು ನಡೆಯುತ್ತಿವೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜಸ್ಥಾನದ ಒಬ್ಬ ಶಿಲ್ಪಿ, ಕರ್ನಾಟಕದ ಇಬ್ಬರು ಶಿಲ್ಪಿಗಳು ಸೇರಿದಂತೆ ಏಕಕಾಲಕ್ಕೆ ಮೂವರು ಶಿಲ್ಪಿಗಳು ಪ್ರತ್ಯೇಕವಾಗಿ ಬಾಲರಾಮನ ವಿಗ್ರಹ ಕೆತ್ತನೆ ಮಾಡುತ್ತಿದ್ದಾರೆ ಎಂದು ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯದ ಉಸ್ತುವಾರಿ, ವಿಎಚ್‌ಪಿ ಕೇಂದ್ರೀಯ ಸಹಕಾರ್ಯದರ್ಶಿ ಗೋಪಾಲ್ ತಿಳಿಸಿದ್ದಾರೆ.
ರಾಷ್ಟ್ರೋತ್ಥಾನ ಪರಿಷತ್ ವಿದ್ಯಾ ಕೇಂದ್ರ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ ಕೆತ್ತನೆ ಬಳಿಕ ಮೂರೂ ವಿಗ್ರಹಗಳನ್ನು ಪರಿಶೀಸಲಾಗುತ್ತದೆ. ಶಿಲ್ಪಶಾಸ್ತ್ರ ಸಮ್ಮತವಾಗಿರತಕ್ಕಂಥ ವಿಗ್ರಹ ಆಯ್ಕೆ ಮಾಡಿ ಗರ್ಭಗುಡಿಯಲ್ಲಿ ಪ್ರತಿಷ್ಠಾನೆ ಮಾಡಲಾಗುತ್ತದೆ. ವಿಗ್ರಹ ಕೆತ್ತನೆಗೆ ಐದಾರು ತಿಂಗಳು ಬೇಕು. ಒಬ್ಬರಿಂದಲೇ ವಿಗ್ರಹ ಕೆತ್ತನೆಗೆ ಒಬ್ಬನೇ ಶಿಲ್ಪಿಗೆ ಜವಾಬ್ದಾರಿ ವಹಿಸಿದ್ದರೆ, ಕೊನೇ ಹಂತದಲ್ಲಿ ಸ್ವಲ್ಪ ಆಚೀಚೆ ಆದರೂ ಮತ್ತೊಂದು ವಿಗ್ರಹಕ್ಕಾಗಿ 6 ತಿಂಗಳು ಕಾಯಬೇಕಾಗುತ್ತದೆ. ರಾಮಲಲ್ಲಾ ಮಂದಿರದೊಳಗೆ ಬಂದು ಕೂರಬೇಕು ಎಂಬ ಸದುದ್ದೇಶದಿಂದ ಏಕಕಾಲಕ್ಕೇ ಮೂವರು ಶಿಲ್ಪಿಗಳಿಗೆ ರಾಮನ ಬಾಲ ರೂಪ ವಿಗ್ರಹ ಕೆತ್ತನೆಗೆ ನೇಮಿಸಲಾಗಿದೆ. 2 ವಿಗ್ರಹಗಳನ್ನು ಬೇರೆಕಡೆಗಳಲ್ಲಿ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.