ಅಮೆರಿಕದ (America) 5 ವರ್ಷದ ಬಾಲಕನೊಬ್ಬ 40 ಚ್ಯೂಯಿಂಗ್ ಗಮ್ (Chewing Gum) ನುಂಗಿದ ಪರಿಣಾಮ ಜಠರದಲ್ಲಿ ಸಮಸ್ಯೆಯಾಗಿ ಗಂಭೀರ ಸಮಸ್ಯೆ ಎದುರಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಹೊಟ್ಟೆ ಸಮಸ್ಯೆಯಿಂದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಹೊಟ್ಟೆ ಸ್ಕ್ಯಾನ್ ಮಾಡಿದಾಗ, ಹೆಚ್ಚಿನ ಪ್ರಮಾಣದ ಚ್ಯೂಯಿಂಗ್ ಗಮ್ ನುಂಗಿರುವುದು ಪತ್ತೆಯಾಗಿದೆ. ಜೀರ್ಣವಾಗದ ಈ ಪದಾರ್ಥ ಬಾಲಕನ ಜಠರದಲ್ಲಿ ಅಡಚಣೆ ಉಂಟು ಮಾಡಿತ್ತು ಎಂದು ವೈದ್ಯರು ಹೇಳಿದ್ದಾರೆ.
ವೈದ್ಯರು ಅವನ ಗಂಟಲಿನ ಕೆಳಗೆ ಲೋಹದ ಟ್ಯೂಬ್ ಇರಿಸುವ ಮೂಲಕ ಚ್ಯೂಯಿಂಗ್ ಗಮ್ ತೆಗೆದುಹಾಕಿದರು. ಚಿಕಿತ್ಸೆಯಿಂದ ಬಾಲಕನಿಗೆ ಸದ್ಯದ ಮಟ್ಟಿಗೆ ಗಂಟಲು ನೋವಿದ್ದರೂ, ದೀರ್ಘಾವಧಿಯ ಆರೋಗ್ಯ ಸಮಸ್ಯೆ ಇರಲ್ಲ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ.
ಜೀರ್ಣವಾಗದ ಚ್ಯೂಯಿಂಗ್ ಗಮ್ ಪದಾರ್ಥವನ್ನು ಅಕಸ್ಮಾತ್ ನುಂಗಿದರೆ 7 ವರ್ಷಗಳ ವರೆಗೆ ಹೊಟ್ಟೆಯಲ್ಲಿರುತ್ತದೆ ಎಂದು ನಂಬಲಾಗಿತ್ತು. ಆದರೆ, ಇದು ತಪ್ಪು ಎಂದಿರುವ ವೈದ್ಯರು, ಇಂತಹ ಪದಾರ್ಥ ಸುಮಾರು 40 ಗಂಟೆಗಳ ವರೆಗೆ ದೇಹದಲ್ಲಿರುತ್ತದೆ. ನಂತರ ಮಲದ ಮುಖಾಂತರ ಹೊರಬರುತ್ತದೆ. ಅದರನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಸಂಪೂರ್ಣ ಹೊರಬರುತ್ತದೆ ಎಂದು ಡಯೆಟಿಷಿಯನ್ ಬೆತ್ ಸೆರ್ವೊನಿ ಹೇಳಿದ್ದಾರೆ.