ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಆರಂಭಕ್ಕೂ ಮುನ್ನವೇ ವರುಣ (Rain in Karnataka)ನ ಅವಾಂತರ ಹೆಚ್ಚಾಗುತ್ತಿದೆ. ಪರಿಣಾಮ ಮಳೆಗಾಲದ ಪೂರ್ವದಲ್ಲಿಯೇ ಜನ- ಜೀವನ ಅಸ್ತವ್ಯಸ್ಥವಾಗಿದೆ. ಹಲವಾರು ಪ್ರದೇಶಗಳಲ್ಲಿ ಸಾವು- ನೋವು ಉಂಟಾಗಿವೆ.
ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಹಲವು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದೆ. ಹಲೆವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಿದ್ದು, ಸಂಜೆ ಮಳೆ ಗಾಳಿಗೆ ಸಾಕಷ್ಟು ತೊಂದರೆಗಳು ಸೃಷ್ಟಿಯಾಗಿವೆ. ಪಟ್ಟಣದ ವಿನೋಬ ನಗರದ ಆಶ್ರಯ ಬಡಾವಣೆ ನಿವಾಸಿ ಲಕ್ಷ್ಮಿಬಾಯಿ ಕುರಿಗಳಿಗೆ ಮೇವು ತರಲು ಹೋಗಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ತೆಂಗಿನ ಮರವೊಂದು ಬಿದ್ದು ಎರಡು ಕಾರುಗಳು ಜಖಂಗೊಂಡಿವೆ. ಸೋಮಿನಕೊಪ್ಪ ಬಡಾವಣೆಯಲ್ಲಿ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ರಾಜಕಾಲುವೆಯಲ್ಲಿ ಸಿಲುಕಿದ್ದ ಎಮ್ಮೆಯನ್ನು ರಕ್ಷಿಸಲಾಗಿದೆ.
ವಿಜಯಪುರ (Vijayapura) ಜಿಲ್ಲೆಯ ನಿಡಗುಂದಿ ತಾಲೂಕಿನ ಕಿರಿಶ್ಯಾಳ ಗ್ರಾಮದಲ್ಲಿ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ದ್ಯಾಮಣ್ಣ ಎಂಬವರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಸಲಾದಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ 20ಕ್ಕೂ ಹೆಚ್ಚು ಕುರಿಗಳು ಮೇಕೆಗಳು ಸಾವನ್ನಪ್ಪಿವೆ. ಕುಂತ್ನಾಳ ಗ್ರಾಮದಲ್ಲಿ ರೈತ ಪಂಪಾಪತಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯ ವಿವಿಧೆಡೆ ವರುಣನ ಅಬ್ಬರ ಅವಾಂತರ ಸೃಷ್ಟಿಸಿದೆ.