ಮಂಗಳೂರು: ಬಿಹಾರದಲ್ಲಿ (Bihar) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ದಾಳಿಗೆ ಸಂಚು ರೂಪಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಎನ್ ಐಎ (NIA) ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ 16 ಪ್ರದೇಶಗಳಲ್ಲಿ ದಾಳಿ ನಡೆಸಿದ್ದಾರೆ.
ಈ ಭಯೋತ್ಪಾದಕ ಕೃತ್ಯಕ್ಕೆ ಗಲ್ಫ್ ರಾಷ್ಟ್ರಗಳಿಂದ ಹವಾಲ ಹಣ ಬಳಕೆ ಆರೋಪ ಕೇಳಿ ಬಂದಿದೆ. ಹೀಗಾಗಿ ಅಧಿಕಾರಿಗಳು ಸಾಕಷ್ಟು ಮನೆ, ಕಚೇರಿ ಮತ್ತು ಒಂದು ಆಸ್ಪತ್ರೆಯನ್ನು ಪರಿಶೀಲಿಸಿದ್ದಾರೆ. ದಕ್ಷಿಣ ಭಾರತದ ಪಿಎಫ್ ಐ (PFI) ಹವಾಲ ಹಣದ ಜಾಲವನ್ನು ಎನ್ ಐಎ ಭೇದಿಸುತ್ತಿದೆ. ದೇಶದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ನೆಟ್ವರ್ಕ್ ಪತ್ತೆಯಾಗಿದೆ. ಈ ಕುರಿತು ಪತ್ತೆಹಚ್ಚುವ ಸಲುವಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳ ನೆರವು ಪಡೆದು ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು ಸೇರಿ 16 ಕಡೆ ದಾಳಿ ನಡೆಸಿದ್ದಾರೆ.
ಪಾಟ್ನಾದಲ್ಲಿ 2022ರ ಜುಲೈ ತಿಂಗಳಿನಲ್ಲಿ ಪುಲ್ವಾರಿ ಶರೀಫ್ ಪ್ರಕರಣ ಪತ್ತೆಯಾಗಿತ್ತು. ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದು, ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಕರಣದ ತನಿಖೆಯ ಜಾಡು ಹಿಡಿದು ಎನ್ಐಎ ಅಧಿಕಾರಿಗಳ ತಂಡವು ದಕ್ಷಿಣ ಕನ್ನಡದ ಪುತ್ತೂರು ಮತ್ತು ಬಂಟ್ವಾಳದಲ್ಲಿ ದಾಳಿ ನಡೆಸಿತ್ತು.
ಬಂಟ್ವಾಳ ನಿವಾಸಿ ಮಹಮ್ಮದ್ ಸಿನಾನ್, ಸಜಿಪ ಮೂಡದ ಸರ್ಫ್ರಾಜ್ ನವಾಜ್, ಇಕ್ಬಾಲ್, ಪುತ್ತೂರಿನ ಅಬ್ದುಲ್ ರಫೀಕ್ ಎಂಬವರನ್ನು ಬಂಧಿಸಲಾಗಿತ್ತು. ಅಲ್ಲದೇ ಕೇರಳದ ಕಾಸರಗೋಡಿನ ಕುಂಜತ್ತೂರು ನಿವಾಸಿ ಅಬೀದ್ ಕೆ.ಎಂ. ಎಂಬಾತನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು.