ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸದ ಹಿನ್ನೆಲೆಯಲ್ಲಿ ಸುಮಾರು 40ಕ್ಕೂ ಅಧಿಕ ವೈದ್ಯಕೀಯ ಕಾಲೇಜುಗಳು ಮಾನ್ಯತೆ ಕಳೆದುಕೊಂಡಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸದ್ಯದ ವರದಿಯಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ನಿಗದಿಪಡಿಸಿದ ಮಾನದಂಡಗಳ ಪಾಲನೆಯಲ್ಲಿ ಲೋಪದೋಷ ಕಂಡು ಬಂದ ಪರಿಣಾಮ ದೇಶಾದ್ಯಂತ ಕಳೆದ 2 ತಿಂಗಳ ಅವಧಿಯಲ್ಲಿ ಸುಮಾರು 40ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ಮಾನ್ಯತೆ ಕಳೆದುಕೊಂಡಿವೆ. ಅಲ್ಲದೆ ಪುದುಚೇರಿ, ಗುಜರಾತ್, ಅಸ್ಸಾಂ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಇನ್ನೂ 100ಕ್ಕೂ ಅಧಿಕ ವೈದ್ಯಕೀಯ ಕಾಲೇಜುಗಳು ಎನ್‌ಎಂಸಿಯ ಮಾನದಂಡಗಳನ್ನು ಅನುಸರಿಸದ ಕಾರಣ ಮಾನ್ಯತೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಸುಮಾರು 100ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ ಅರುಣಾಚಲ ಪ್ರದೇಶದ ಪ್ರಮುಖ ವೈದ್ಯಕೀಯ ಕಾಲೇಜು ಸಂಸ್ಥೆ ಕೂಡ ಎನ್‌ಎಂಸಿಯ ಮಾನ್ಯತೆ ಕಳೆದುಕೊಂಡಿದೆ. ಈ ಸಂಸ್ಥೆಗಳು ಮಾನದಂಡಗಳನ್ನು ಅನುಸರಿಸದಿರುವುದು ಮತ್ತು ಅಧ್ಯಾಪಕರು ಮತ್ತು ಭದ್ರತಾ (ಸಿಸಿಟಿವಿ) ಕ್ಯಾಮೆರಾಗಳಿಗೆ ಸಂಬಂಧಿಸಿದ ಲೋಪಗಳ ಕಾರಣದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ..
ಸರ್ಕಾರದ ಅಂಕಿಅಂಶಗಳ ಪ್ರಕಾರ, ವೈದ್ಯಕೀಯ ಕಾಲೇಜುಗಳ ಸಂಖ್ಯೆ 2014ರಲ್ಲಿ 387 ರಿಂದ ಪ್ರಸ್ತುತ 654 ಕ್ಕೆ ಏರಿದೆ, ಇದು ಸುಮಾರು ಎರಡು ಪಟ್ಟು ಹೆಚ್ಚಾಗಿದೆ. ಎಂಬಿಬಿಎಸ್ ಸೀಟುಗಳ ಸಂಖ್ಯೆಯೂ ಶೇ.94ರಷ್ಟು ಏರಿಕೆಯಾಗಿದೆ.