ತಿರುನಲ್ವೇಲಿ: ಅತ್ತೆ- ಸೊಸೆ ಜಗಳ ಎನ್ನುವುದು ಅನಾದಿಕಾಲದಿಂದಲೂ ಇರುವ ವಿಚಾರವಾಗಿದೆ. ಆದರೆ, ಇಲ್ಲೊಬ್ಬ ಸೊಸೆಯು ಅತ್ತೆಯ ಮೇಲಿನ ದ್ವೇಷ ತೀರಿಸಿಕೊಳ್ಳಲು ಪುರುಷ ವೇಷ ಧರಿಸಿ ಕೊಲೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 28 ವರ್ಷದ ಮಹಿಳೆಯನ್ನು ತಮಿಳುನಾಡಿನ ಪೊಲೀಸರು ತಿರುನಲ್ವೇಲಿಯಲ್ಲಿ ಬಂಧಿಸಿದ್ದಾರೆ. ಸೀತಾಲಕ್ಷ್ಮಿ ಸಾವನ್ನಪ್ಪಿದ ಅತ್ತೆಯಾಗಿದ್ದು, ಮಹಾಲಕ್ಷ್ಮೀ ಕೊಲೆ ಮಾಡಿದ ಸೊಸೆ ಎಂದು ತಿಳಿದು ಬಂದಿದೆ. ಮಹಾಲಕ್ಷ್ಮಿಯು ಪ್ರಾರಂಭದಲ್ಲಿ ಚಿನ್ನದ ಸರಕ್ಕಾಗಿ ತನ್ನ ಅತ್ತೆಯನ್ನು ಅಪರಿಚಿತರು ಕೊಲೆ ಮಾಡಿದ್ದಾರೆ ಎಂದು ಹೇಳುವ ಮೂಲಕ ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾಳೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿದಾಗ, ಟ್ರ್ಯಾಕ್‌ಸೂಟ್, ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬರು ಮನೆಗೆ ಪ್ರವೇಶಿಸುತ್ತಿರುವುದು ಪೊಲೀಸರಿಗೆ ಕಂಡು ಬಂದಿದೆ. ಆದರೆ, ಪತಿಯ ಬಟ್ಟೆ ತೊಟ್ಟು ಬಂದು ಮಹಾಲಕ್ಷ್ಮೀ ಸಿಕ್ಕು ಬಿದ್ದಿದ್ದಾರೆ.
ಸೀತಾಲಕ್ಷ್ಮಿಯವರ ಪತಿ ಷಣ್ಮುಗವೇಲ್ ಅವರು ದನದ ಕೊಟ್ಟಿಗೆಗೆ ಹೋಗಿ ಮರಳಿ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಮಹಾಲಕ್ಷ್ಮಿ ಆಗಮಿಸಿದ್ದಾರೆ. ನೆರೆಹೊರೆಯವರು ಸ್ಥಳಕ್ಕಾಗಮಿಸಿದಾಗ, ಅಪರಿಚಿತ ವ್ಯಕ್ತಿಗಳು ತಾನು ಧರಿಸಿದ್ದ ಚಿನ್ನದ ಸರಕ್ಕಾಗಿ ಅತ್ತೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ, ”ಎಂದು ಅಧಿಕಾರಿಯೊಬ್ಬರು ಹೇಳಿದರು. ಪೊಲೀಸರು ಗಾಯಗೊಂಡ ಮಹಿಳೆಯನ್ನು ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಮಹಾಲಕ್ಷ್ಮಿ ಮತ್ತು ಸೀತಾಲಕ್ಷ್ಮಿ ಅವರ ನಡುವೆ ಉತ್ತಮ ಸಂಬಂಧವಿಲ್ಲ ಮತ್ತು ಇಬ್ಬರೂ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಸೀತಾಲಕ್ಷ್ಮಿ ಅವರ ಮಗ ರಾಮಸ್ವಾಮಿಯನ್ನು ಮದುವೆಯಾದ ದಿನದಿಂದಲೂ ಮಹಾಲಕ್ಷ್ಮಿ ತನ್ನ ಅತ್ತೆಯ ಮೇಲೆ ದ್ವೇಷ ಸಾಧಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ತಿ ಸೇರಿದಂತೆ ಕೆಲವು ವಿಷಯಗಳಲ್ಲಿ ಅತ್ತೆ- ಸೊಸೆಗೆ ಸರಿ ಇರಲಿಲ್ಲ. ಈ ಕಾರಣಕ್ಕೆ ಕೊಲೆ ಮಾಡಿದ್ದಾಳೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಮಹಾಲಕ್ಷ್ಮಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಜೈಲಿಗೆ ಅಟ್ಟಿದ್ದಾರೆ.