ವಾಷಿಂಗ್ಟನ್: ನನ್ನನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಿದ್ದಕ್ಕೆ ನನಗೆ ಜನ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ (Stanford University Campus in California) ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಜಕೀಯಕ್ಕೆ ಬಂದಾಗ ಸಂಸದನ ಸ್ಥಾನದಿಂದ ಅನರ್ಹಗೊಳ್ಳುತ್ತೇನೆ ಎಂದು ನಾನು ಊಹಿಸಿರಲಿಲ್ಲ. ಆದರೆ ಅನರ್ಹತೆಯಿಂದಾಗಿ ದೇಶದ ಜನರ ಸೇವೆಯಲ್ಲಿ ತೊಡಗಿಕೊಳ್ಳುವ ಹೊಸ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಪ್ರತಿಪಕ್ಷಗಳು ತೊಂದರೆ ಎದುರಿಸುತ್ತಿವೆ. ದೇಶದಲ್ಲಿ ಪ್ರಜಾಸತ್ತಾತ್ಮಕ ಹೋರಾಟವನ್ನು ನಡೆಸಲು ಸಹ ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯನ್ನು (Bharat Jodo Yatra) ಕೈಗೊಳ್ಳುವ ತೀರ್ಮಾನ ಮಾಡಿತು ಎಂದು ಹೇಳಿದ್ದಾರೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಉಪನಾಮ (Modi Surname) ಬಳಸಿ ನೀಡಿದ್ದ ಹೇಳಿಕೆಗೆ 2019ರಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಸೂರತ್ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ನಂತರ ಅವರನ್ನು ವಯನಾಡು (Wayanad) ಲೋಕಸಭಾ (Lok Sabha) ಕ್ಷೇತ್ರದ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.