ಕ್ರಿಕೆಟ್ ಲೋಕದ ದಂತಕಥೆ ಸಚಿನ್ ತೆಂಡೂಲ್ಕರ್ ತಂಬಾಕು ಜಾಹಿರಾತಿನಲ್ಲಿ ನಟಿಸದಿರುವುದಕ್ಕೆ ತಂದೆಯ ಸಲಹೆಯೇ ಕಾರಣ ಎಂದು ಹೇಳಿದ್ದಾರೆ.
ತಂಬಾಕು ಉತ್ಪನ್ನಗಳನ್ನು ಉತ್ತೇಜಿಸುವುದಕ್ಕೆ, ಪ್ರೊಮೋಟ್ ಮಾಡುವುದಕ್ಕಾಗಿ ಸಾಕಷ್ಟು ಜಾಹೀರಾತು ಅವಕಾಶಗಳು ಬಂದಿದ್ದವು. ಜೀವನದ ಗುರಿಗಳನ್ನು ಸಾಧಿಸುವುದಕ್ಕೆ ಫಿಟ್ನೆಸ್ ಬಗ್ಗೆ ಶಿಸ್ತನ್ನು ಬೆಳೆಸಿಕೊಳ್ಳುವುದು, ಜಾಗೃತರಾಗಿರುವುದು ಬಹಳ ಮುಖ್ಯ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದು, ತಂಬಾಕು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದಿದ್ದಾರೆ.
ಬಾಯಿಯ ನೈರ್ಮಲ್ಯ ಅಭಿಯಾನದ ಭಾಗವಾಗಿರುವ ಮಹಾರಾಷ್ಟ್ರ ಸರ್ಕಾರದ ಸ್ವಚ್ಛ ಮುಖ್ ಅಭಿಯಾನ್ (ಎಸ್ಎಂಎ) ಗೆ ನಗುವಿನ ರಾಯಭಾರಿ (Smile Ambassador)ಯಾಗಿ ಮಾತನಾಡಿದ ಅವರು, ಭಾರತ ಕ್ರಿಕೆಟ್ ತಂಡಕ್ಕಾಗಿ ಆಡಲು ಆರಂಭಿಸಿದಾಗ, ಶಾಲಾ ವಿದ್ಯಾಭ್ಯಾಸ ಮುಗಿಸಿದ್ದೆ. ನನಗೆ ಜಾಹಿರಾತುಗಳಲ್ಲಿ ನಟಿಸಿ, ಉತ್ಪನ್ನಗಳನ್ನು ಪ್ರೊಮೋಟ್ ಮಾಡಲು ಅನೇಕ ಅವಕಾಶಗಳು ಬಂದಿದ್ದವು. ನನಗೆ ನನ್ನ ತಂದೆ ಎಂದಿಗೂ ತಂಬಾಕು ಉತ್ಪನ್ನಗಳನ್ನು ಉತ್ತೇಜಿಸದಂತೆ ಹೇಳಿದ್ದರು. ಹೀಗಾಗಿ ನಾನು ಅನೇಕ ಆಫರ್ ಗಳನ್ನು ಒಪ್ಪಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ಬಾಯಿ ಆರೋಗ್ಯವಾಗಿದ್ದರೆ, ಒಟ್ಟಾರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಸಚಿನ್ ಹೇಳಿದ್ದಾರೆ.