ಬೆಂಗಳೂರು : ಕಾಂಗ್ರೆಸ್ (Congress) ಪಕ್ಷವು ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿ (Congress Guarantee) ಯೋಜನೆಗಳ ಜಾರಿಗೆಗೆ ಸಂಪುಟ ಒಪ್ಪಿಗೆ ನೀಡಿದ್ದು, ಇಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು ಸಂಪುಟ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಯೋಜನೆಗಳನ್ನು ಘೋಷಿಸಿದ್ದಾರೆ. ಯುವ ನಿಧಿ (Yuva Nidhi) ಯೋಜನೆ 2022-23ರಲ್ಲಿ ತೇರ್ಗಡೆ ಹೊಂದಿದ ವೃತ್ತಿ ಶಿಕ್ಷಣ ಸೇರಿದಂತೆ ಎಲ್ಲಾ ಪದವಿ ಪೂರೈಸಿದ ಯುವಕ ಯುವತಿಯರಿಗೆ ನೀಡಲಾಗುತ್ತಿದೆ.
ನೋಂದಣಿ ಮಾಡಿಕೊಂಡ ದಿನದಿಂದ 2 ವರ್ಷದ ವರೆಗೆ ಪ್ರತಿ ತಿಂಗಳು 3 ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ 1,500 ರೂ. ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಉದ್ಯೋಗ ಪಡೆದರೆ ಅವರೇ ಸ್ವಂತ ಘೋಷಿಸಬೇಕು. 24 ತಿಂಗಳ ಒಳಗೆ ಉದ್ಯೋಗ ಸಿಕ್ಕರೆ ಈ ಯೋಜನೆ ರದ್ದಾಗುತ್ತದೆ. ಯುವಕ, ಯುವತಿ ಹಾಗೂ ತೃತೀಯ ಲಿಂಗಿಗಳಿಗೂ ಈ ಯೋಜನೆ ಅನ್ವಯ ಆಗಲಿದೆ. ಕೋರ್ಸ್ ಮುಗಿಸಿ 180 ದಿನಗಳಾದರೂ ಕೆಲಸ ಸಿಗದ ನಿರುದ್ಯೋಗಿಗಳಾಗಿರಬೇಕು. ವಯಸ್ಸು 18 ರಿಂದ 25ರ ಒಳಗೆ ಇರಬೇಕು. ಅರ್ಜಿ ಸ್ವೀಕಾರಗೊಂಡ ದಿನದಿಂದ 24 ತಿಂಗಳು ಯುವನಿಧಿ ನೀಡಲಾಗುತ್ತದೆ.