ಭುವನೇಶ್ವರ : ಒಡಿಶಾದಲ್ಲಿ (Odisha Train Tragedy) ನಿನ್ನೆ ಸಂಜೆ ಸಂಭವಿಸಿದ ರೈಲು ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಲೇ ಇದೆ. ಇಲ್ಲಿಯವರೆಗೆ ಈ ದುರಂತಕ್ಕೆ 250ಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, 900ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿತ್ತು. ಚೆನ್ನೈ-ಕೊರೊಮಂಡೆಲ್ ಎಕ್ಸ್ಪ್ರೆಸ್ ರೈಲು, ಯಶವಂತಪುರ-ಹೌರ ರೈಲು ಹಾಗೂ ಗೂಡ್ಸ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು.. 12841 ಎಕ್ಸ್ಪ್ರೆಸ್ ರೈಲು ಡಿಕ್ಕಿಯಾದ ರಭಸಕ್ಕೆ ಪ್ರಯಾಣಿಕರಿದ್ದ ರೈಲಿನ ಹಲವು ಬೋಗಿಗಳು ಹಳಿ ತಪ್ಪಿದ್ದರಿಂದಾಗಿ ಸಾವು- ನೋವಿನ ಸಂಖ್ಯೆ ಹೆಚ್ಚಾಗಿದೆ.
ಪಶ್ಚಿಮ ಬಂಗಾಳದ ಶಾಲಿಮಾರ್ ರೈಲು ನಿಲ್ದಾಣದಿಂದ ಚೆನ್ನೈಗೆ ಆಗಮಿಸುತ್ತಿದ್ದ ಈ ರೈಲು ಒಡಿಶಾದಲ್ಲಿ ಯಶವಂತಪುರ ಪ್ಯಾಸೆಂಜರ್ ರೈಲು ಹಾಗೂ ಸರಕು ಸಾಗಾಣೆ ರೈಲಿಗೆ ಡಿಕ್ಕಿ ಹೊಡೆದಿದೆ. ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರುತ್ತ ಸಾಗುತ್ತಿದೆ. ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ರೂ, ಗಂಭೀರ ಗಾಯಗೊಂಡವರಿಗೆ 2 ಲಕ್ಷ ರೂ. ಹಾಗೂ ಸಣ್ಣ ಗಾಯಗಳಾದ ಪ್ರಯಾಣಿಕರಿಗೆ 50,000 ರೂ. ಪರಿಹಾರವನ್ನು ರೈಲ್ವೇ ಇಲಾಖೆ ಘೋಷಿಸಿದೆ.
ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. 3 ಎನ್ಡಿಆರ್ಎಫ್, 4 ಎಸ್ಡಿಆರ್ಎಫ್, ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ 50 ಅಂಬುಲೆನ್ಸ್ಗಳು ನಿರಂತರ ಓಡಾಟ ಮಾಡುತ್ತಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಸ್ಥಳೀಯ ಜನ ಕೂಡ ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಒಡಿಶಾ ರೈಲು ಅಪಘಾತ ಸಹಾಯವಾಣಿ ಆರಂಭಿಸಲಾಗಿದೆ. ಗಾಯಾಳುಗಳು, ಮೃತಪಟ್ಟವರ ಮಾಹಿತಿ ಪಡೆಯಲು ಸಹಾಯವಾಣಿ ಕೇಂದ್ರ ತೆರೆಯಲಾಗಿದೆ.