ಮುಂಗಾರು ಮಳೆ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಹಾಗೂ ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಜೂನ್ 7 ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಂಗಳೂರು, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಮಂಡ್ಯ, ಮೈಸೂರು,ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೇ, ಮುಂದಿನ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಕಲಬುರಗಿಯಲ್ಲಿ 42.6 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಹವಾಮಾನದಲ್ಲಿ ವೈಪರಿತ್ಯ ಉಂಟಾದರೆ ಮುಂಗಾರು ಆಗಮನ ಮತ್ತೆ ಕೆಲವು ದಿನ ಮುಂದೂಡಿಕೆಯಾಗಬಹುದು ಎನ್ನಲಾಗುತ್ತಿದೆ. ಪ್ರತಿ ಭಾರಿಯು ವಾಡಿಕೆಯಂತೆ ನೈಋತ್ಯ ಮುಂಗಾರು ಮಾರುತುಗಳು ಜೂನ್ 1ರಂದು ಕೇರಳ ಪ್ರವೇಶಿಸುತ್ತವೆ. ಅದರೊಂದಿಗೆ ಕೆಲವು ದಿನಗಳಲ್ಲಿ ಕರ್ನಾಟಕ ಪ್ರವೇಶಿಸುತ್ತವೆ. ಈ ಬಾರಿ ನಾಲ್ಕು ದಿನ ವಿಳಂಬವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೆಲವು ದಿನ ತಡವಾದರೂ ಆಗಬಹುದು ಎಂದು ಹೇಳಲಾಗುತ್ತಿದೆ. ಕಳೆದ ವರ್ಷ 2022ರಲ್ಲಿ ಮೇ 29ರಂದು ಮುಂಗಾರು ಆರಂಭವಾಗಿತ್ತು.