ಬಾಲಿವುಡ್ (Bollywood) ನ ಹಿರಿಯ ನಟಿ ಸುಲೋಚನಾ ಲಾತ್ಕರ್ (Sulochana Latkar) ನಿಧನರಾಗಿದ್ದಾರೆ.
ಅವರು ವಯೋ ಸಹಜ ಕಾಯಿಲೆಯಿಂದ ಮುಂಬಯಿನ ಶುಶ್ರೂಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ (Passed Away). 1940ರಲ್ಲಿ ಮರಾಠಿ ಸಿನಿಮಾಗಳ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟ ಸುಲೋಚನಾ, ನಂತರದ ದಿನಗಳಲ್ಲಿ ಹಿಂದಿ ಚಿತ್ರಗಳಲ್ಲೂ ನಟಿಸಿದರು. 250ಕ್ಕೂ ಅಧಿಕ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ಸುಲೋಚನಾ, ಹಿಂದಿ ಜೊತೆಗೆ ಮರಾಠಿ (Marathi) ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. 50ಕ್ಕೂ ಹೆಚ್ಚು ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ಇವರು ಬೆಳಗಾವಿ ಮೂಲದವರು ಎನ್ನಲಾಗಿದೆ.
ಬಾಲಿವುಡ್ ನ ಶಮ್ಮಿ ಕಪೂರ್, ದಿಲೀಪ್ ಕುಮಾರ್, ದೇವಾನಂದ್ ಸೇರಿದಂತೆ ಹಲವು ಹಿರಿಯ ನಟರೊಂದಿಗೆ ಅವರು ಅಭಿನಯಿಸಿದ್ದಾರೆ. ದಿಲ್ ದೇಖೆ ದೇಖೋ, ಆದ್ಮಿ, ಜಾನಿ ಮೇರಾ ನಾಮ್, ಸಂಗ್ತಿ ಐಕಾ, ಪತಿವ್ರತಾ, ಜೀವಚಾ ಸಖಾ ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಸೇವೆಗಾಗಿ ಭಾರತ ಸರ್ಕಾರವು 1999ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಹಾರಾಷ್ಟ್ರ ಸರಕಾರವು ಮಹಾರಾಷ್ಟ್ರ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಜೀವಮಾನ ಸಾಧನೆಗಾಗಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ. ಇಂದು ಸಂಜೆ 5.30ಕ್ಕೆ ದಾದರ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.