ಇಸ್ರೇಲ್ ನ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ತರುವ ವಿವಾದಾತ್ಮಕ ಯೋಜನೆಯ ವಿರುದ್ಧ ರಾಜಧಾನಿ ಟೆಲ್ ಅವೀವ್ ನಲ್ಲಿ ಸತತ 22ನೇ ವಾರದ ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.
ಇಸ್ರೇಲ್ ನ ಸಿಸಾರಿಯಾ ನಗರದಲ್ಲಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸದ ಎದುರು ಸಾವಿರಾರು ಪ್ರಜೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅನುಮತಿ ಪಡೆಯದೆ ಪ್ರತಿಭಟನೆ ನಡೆಸಲಾಗಿದೆ ಎಂದು ಪೊಲೀಸರು 17 ಜನರನ್ನು ಬಂಧಿಸಿದ್ದಾರೆ. ಆದರೆ, ಪೊಲೀಸರ ಲಾಠಿಗೂ ಅಂಜದೆ ಪ್ರತಿಭಟನೆ ನಡೆಯುತ್ತಿದೆ. ಸರ್ಕಾರ ಈ ವಿವಾದಾತ್ಮಕ ಯೋಜನೆಯನ್ನು ಸದ್ಯಕ್ಕೆ ತಡೆ ಹಿಡಿದೆ. ಆದರೆ, ಈ ಯೋಜನೆಯನ್ನು ಸಂಪೂರ್ಣ ಹಿಂಪಡೆಯಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಡೆಯಲಿದೆ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ಇಸ್ರೇಲ್ ಸರ್ವಾಧಿಕಾರಿ ಆಡಳಿತದತ್ತ ಬದಲಾಗುವುದನ್ನು ನಾವು ತಡೆಯಬೇಕಿದೆ. ಈಗ ಅಧಿಕಾರದಲ್ಲಿರುವ ಭ್ರಷ್ಟ ಸರ್ಕಾರದಲ್ಲಿ ಹಲವು ಕ್ರಿಮಿನಲ್ ಗಳಿದ್ದು, ಅವರು ನಮ್ಮ ದೇಶದಲ ಘನತೆಯನ್ನು ತೃತೀಯ ಜಗತ್ತಿನ ದೇಶಗಳ ಮಟ್ಟಕ್ಕೆ ಇಳಿಸಲು ಹೊಂಚು ಹಾಕುತ್ತಿದ್ದಾರೆ ಎಂದು ಆರೋಪಿಸಿ, ಪ್ರತಿಭಠಿಸಿದ್ದಾರೆ. ಇಸ್ರೇಲ್ ನಲ್ಲಿ ಕಟ್ಟಾ ಬಲಪಂಥೀಯ ಪಕ್ಷದ ಬೆಂಬಲದಿಂದ ಮೈತ್ರಿ ಸರ್ಕಾರ ಮುನ್ನಡೆಸುತ್ತಿರುವ ನೆತನ್ಯಾಹು, ನ್ಯಾಯಾಂಗ ಹಾಗೂ ಸಂಸದರ ನಡುವೆ ಅಧಿಕಾರದ ಸಮತೋಲನಕ್ಕೆ ಪ್ರಸ್ತಾವಿತ ನ್ಯಾಯಾಂಗ ಸುಧಾರಣೆ ಅಗತ್ಯ ಎಂದು ಹೇಳಿದ್ದಾರೆ.