ಬೆಂಗಳೂರು: ಸಿಲಿಕಾನ್ ಸಿಟಿಯ ಜಯನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮಂಜುನಾಥ್ ಅವರು ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಪತ್ನಿ ಹಾಗೂ ಓರ್ವ ಪುತ್ರನನ್ನು ಅವರು ಅಗಲಿದ್ದಾರೆ. ಲಿವರ್ ಕ್ಯಾನ್ಸರ್ ಕೊನೆ ಹಂತದಲ್ಲಿದ್ದಾಗ ಅದು ಮಂಜುನಾಥ್ ಗಮನಕ್ಕೆ ಬಂದಿದೆ. ಹೀಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ, ಭಾನುವಾರ ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಹಾಸನಕ್ಕೆ ಇನ್ಸ್ಪೆಕ್ಟರ್ ಮಂಜುನಾಥ್ ಮೃತದೇಹ ಕೊಂಡೊಯ್ಯಲಾಗಿದ್ದು, ಅವರ ಹುಟ್ಟೂರಾದ ಹುಟ್ಟೂರಾದ ಹಾಸನ ಜಿಲ್ಲೆಯ ಉದ್ದೂರಿನಲ್ಲಿ ಇಂದು (ಜೂನ್ 05) ಅಂತ್ಯ ಸಂಸ್ಕಾರ ನಡೆಯಲಿದೆ. ಆರೋಗ್ಯದಲ್ಲಿ ತೀರಾ ಏರುಪೇರಾಗುತ್ತಿದ್ದರಿಂದ ಚಿಕಿತ್ಸೆಗಾಗಿ ಸಾವಿಗೂ ಮುನ್ನ ಕೇವಲ 15 ದಿನ ಮೊದಲು ರಜೆ ಪಡೆದಿದ್ದರು. ಇವರಿಗೆ ಕೆಲವೇ ವರ್ಷಗಳ ಹಿಂದೆ ಮದುವೆಯಾಗಿತ್ತು. ಪತ್ನಿ ಹಾಗೂ ಚಿಕ್ಕ ಮಗ ಇದ್ದಾನೆ. ದಕ್ಷ ಹಾಗೂ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುವ ಮೂಲಕ ಹಂತ ಹಂತವಾಗಿ ಉನ್ನತ ಸ್ಥಾನಗಳನ್ನು ಮಂಜುನಾಥ್ ಪಡೆಯುತ್ತ ಬಂದಿದ್ದರು. ದಕ್ಷ ಕಾರ್ಯ ನಿರ್ವಹಣೆಯಿಂದ ಬೆಂಗಳೂರಿನ ಜಯನಗರ ಠಾಣೆಗೆ ವರ್ಗಾವಣೆಯಾಗಿ ಬಂದಿದ್ದರು.
ಮೈಸೂರು ಪೊಲೀಸ್ ಅಕಾಡೆಮಿಯಲ್ಲಿ ವೃತ್ತಿ ಜೀವನ ಆರಂಭಿಸಿದ್ದ ಅವರು, ಬೆಳಗಾವಿ, ಚಾಮರಾಜನಗರ, ಬೇಲೂರು ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಲ್ಲಿ ಅಂದರೆ, 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಕೆಲವೆಡೆ ಪೀಪಲ್ಸ್ ಮ್ಯಾನ್ ಎಂದು ಕರೆಯಲಾಗುತ್ತಿತ್ತು. ಆದರೆ, ವಿಧಿಯಾಟಕ್ಕೆ ಅವರು ಬಲಿಯಾಗಿದ್ದಾರೆ.