ದೆಹಲಿಯ ಜಾಮಿಯಾ ನಗರದ ಕಾರ್ಖಾನೆಯೊಂದರಲ್ಲಿ ಮರದ ಪೆಟ್ಟಿಗೆಯಲ್ಲಿ 7 ಹಾಗೂ 8 ವರ್ಷದೊಳಗಿನ ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಈ ಮಕ್ಕಳು ಜೂನ್ 5 ರಿಂದ ನಾಪತ್ತೆಯಾಗಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪೊಲೀಸ್ ತನಿಖೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಕಾರ್ಖಾನೆಯಲ್ಲಿ ಇಬ್ಬರು ಮಕ್ಕಳ ಶವ ಪತ್ತೆಯಾದ ಕುರಿತು ಜಾಮಿಯಾನಗರ ಪಿಎಸ್ ಗೆ ಕರೆ ಬಂದಿತ್ತು. ನಂತರ ಅಲ್ಲಿಗೆ ತೆರಳಿದಾಗ ಮರದ ಪೆಟ್ಟಿಗೆಯಲ್ಲಿ ಶವಗಳು ಕಂಡು ಬಂದಿವೆ. ಈ ಮನೆಯಲ್ಲಿ ಮಕ್ಕಳು ತಮ್ಮ ಪೋಷಕರೊಂದಿಗೆ ವಾಸಿಸುತ್ತಿದ್ದರು ಮತ್ತು ಅವರ ತಂದೆ ಬಲ್ಬೀರ್ ಅಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮೃತ ಮಕ್ಕಳು ಅಂದು ಮಧ್ಯಾಹ್ನ 3 ಗಂಟೆಗೆ ತಮ್ಮ ಪೋಷಕರೊಂದಿಗೆ ಊಟ ಮಾಡಿದ್ದು, ಮಧ್ಯಾಹ್ನದ ನಂತರ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಪೋಷಕರು ತಮ್ಮ ಮಕ್ಕಳ ಹುಡುಕಾಟ ನಡೆಸಿದಾಗ ಮರದ ಪೆಟ್ಟಿಗೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ದೇಹಗಳ ಮೇಲೆ ಯಾವುದೇ ಗಾಯವಿಲ್ಲ ಎಂದು ಅಪರಾಧ ತಂಡ ದೃಢಪಡಿಸಿದೆ. ಇದು ಆಕಸ್ಮಿಕವಾಗಿ ಉಸಿರುಕಟ್ಟಿ ಸಾವನ್ನಪ್ಪಿರುವ ಪ್ರಕರಣ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.