ಸಿಲಿಕಾನ್ ಸಿಟಿಯಲ್ಲಿ ನೀರು ಬಳಕೆ ಶುಲ್ಕ ಏರಿಕೆಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಡಿಸಿಎಂ ಡಿ.ಕೆ. ಶಿವಕುಮಾರ್ ನಿನ್ನೆ ಸಂಜೆ ಕಾವೇರಿ ಭವನಕ್ಕೆ ಭೇಟಿ ನೀಡಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೈಗೊಂಡಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಲಮಂಡಳಿ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳ ಕುರಿತು ಅಧಿಕಾರಿಗಳು ಡಿಸಿಎಂಗೆ ಮಾಹಿತಿ ನೀಡಿದರು. 2014ರಿಂದಲೂ ನೀರಿನ ದರ ಪರಿಷ್ಕರಣೆ ಮಾಡಲಾಗಿಲ್ಲ. ಜಲಮಂಡಳಿ ಬಳಿ ಸಿಬ್ಬಂದಿ, ಅಧಿಕಾರಿಗಳಿಗೆ ವೇತನ ನೀಡಲೂ ಹಣವಿಲ್ಲದಂತಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಜಲಮಂಡಳಿಗೆ ಪ್ರತಿ ತಿಂಗಳು ಮಾಸಿಕ 110 ಕೋಟಿ ರೂ. ಆದಾಯ ಬರುತ್ತಿದೆ, ಆದರೆ, ಮಾಸಿಕ ವೆಚ್ಚವೇ ಸುಮಾರು 140 ಕೋಟಿ ರೂ ಆಗುತ್ತಿದೆ. ವಿದ್ಯುತ್ ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ಶುಲ್ಕಕ್ಕಾಗಿ 90 ಕೋಟಿ ರೂ ನೀಡಲಾಗುತ್ತಿದೆ. ವಿದ್ಯುತ್ ದರದಲ್ಲಿ ವಾರ್ಷಿಕ ಹೆಚ್ಚಳವಾಗಿದ್ದರೂ, ನೀರಿನ ದರವು 2014 ರಿಂದ ಒಂದೇ ಇದೆ. ದರ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಇದಕ್ಕೆ ಸರ್ಕಾರದ ಒಪ್ಪಿಗೆಯಷ್ಟೇ ಬಾಕಿಯಿದೆ ಎಂದು ಬಿಡಬ್ಲ್ಯೂಎಸ್ಎಸ್’ಬಿ ಅಧ್ಯಕ್ಷ ಜಯರಾಮ್ ಅವರು ಹೇಳಿದ್ದಾರೆ.
ಸದ್ಯ ಅಧಿಕಾರಿಗಳ ಪ್ರಸ್ತಾವನೆ ಪರಿಶೀಲಿಸಿರುವ ಡಿಸಿಎಂ ಎಲ್ಲ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಕಳೆದ 9 ವರ್ಷಗಳಲ್ಲಿ ವಿದ್ಯುತ್ ದರದಲ್ಲಿ ಶೇ.10ರಷ್ಟು ಹೆಚ್ಚಳ ಮಾಡಲಾಗಿದೆ. ನಗರವು ಪ್ರಸ್ತುತ ದಿನಕ್ಕೆ 1,450 ಮಿಲಿಯನ್ ಲೀಟರ್ ನೀರನ್ನು (ಎಂಎಲ್ಡಿ) ಪಡೆಯುತ್ತಿದೆ. ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆ ಪೂರ್ಣಗೊಂಡರೆ ಇನ್ನೂ 775 ಎಂಎಲ್ಡಿ ನೀರು ಲಭಿಸಲಿದೆ.