ತೆಲುಗು ಚಿತ್ರರಂಗದ ಮೆಗಾ ಫ್ಯಾಮಿಲಿಯಲ್ಲಿ (Mega Family) ಹಿಂದಿನ ವರ್ಷ ಮೆಗಾ ಸಹೋದರ ನಾಗಬಾಬು ಅವರ ಮಗಳ ಮದುವೆ ನಡೆದಿತ್ತು. ಸದ್ಯ ಅವರ ಅಣ್ಣ ವರುಣ್ ತೇಜ್ ನಿಶ್ಚಿತಾರ್ಥ ನಡೆಯುತ್ತಿದೆ.
ಮೆಗಾಸ್ಟಾರ್ ಚಿರಂಜೀವಿಯ (Megastar Chiranjeevi) ಸಹೋದರ ನಾಗಬಾಬು ಅವರ ಪುತ್ರ ವರುಣ್ ತೇಜ್ (Varun Tej) ತೆಲುಗು ಚಿತ್ರರಗದಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ವರುಣ್ ತೇಜ್ ತಮ್ಮ ಸಹನಟಿಯಾಗಿದ್ದ ಲಾವಣ್ಯಾ ತ್ರಿಪಾಠಿಯೊಟ್ಟಿಗೆ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವರುಣ್ ತೇಜ್ ಹಾಗೂ ಲಾವಣ್ಯಾ ಪರಸ್ಪರ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಪ್ರೀತಿಗೆ ಮದುವೆ ಮುದ್ರಣ ಒತ್ತುತ್ತಿದ್ದಾರೆ.
ವರುಣ್ ತೇಜ್ ಹಾಗೂ ಲಾವಣ್ಯಾ ತ್ರಿಪಾಠಿ ಅವರ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಸರಳವಾಗಿ ವರುಣ್ ತೇಜ್ ಕುಟುಂಬದವರು ಮಾಡುತ್ತಿದ್ದು, ಮೆಗಾ ಫ್ಯಾಮಿಲಿ ಸದಸ್ಯರು ಹಾಗೂ ಕೆಲವು ಆಪ್ತ ಸ್ನೇಹಿತರಷ್ಟೆ ಕಾರ್ಯಕ್ರಮದಲ್ಲ ಭಾಗಿಯಾಗುತ್ತಿದ್ದಾರೆ. ವರುಣ್ ತೇಜ್ ಹಾಗೂ ಲಾವಣ್ಯಾರ ನಿಶ್ಚಿತಾರ್ಥಕ್ಕೆ ಮೆಗಾ ಫ್ಯಾಮಿಲಿ ಸದಸ್ಯರು ಆಗಮಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ಅಲ್ಲು ಅರ್ಜುನ್ ಕುಟುಂಬ, ರಾಮ್ ಚರಣ್ ಕುಟುಂಬ, ಪವನ್ ಕಲ್ಯಾಣ್ ಇನ್ನು ಹಲವರು ನಿಶ್ಚಿತಾರ್ಥಕ್ಕೆ ಆಗಮಿಸಿ ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ. ಈ ಜೋಡಿಯ ಮದುವೆ ಇದೇ ವರ್ಷ ನವೆಂಬರ್ ತಿಂಗಳಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ.