ತುಮಕೂರು: ತಾಯಿಯೊಬ್ಬಳು ತನ್ನ ಒಂದು ವರ್ಷದ ಹೆಣ್ಣು ಮಗುವನ್ನು ಬ್ಲೇಡ್ ನಿಂದ ಕೊಯ್ದು ನಂತರ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ.
ಪಟ್ಟಣದ ಡೂಮ್ಲೈಟ್ ವೃತ್ತದ ಹತ್ತಿರ ತಿಪ್ಪಾಪುರ ಛತ್ರದ ಹಿಂಭಾಗದ ನಿವಾಸಿ ಶಿವಾನಂದ ಎಂಬುವವರ ಪತ್ನಿ ಶ್ವೇತಾ (28) ಎಂಬ ಮಹಿಳೆಯೇ ತನ್ನ ಮಗಳ ಕೈಯನ್ನು ಬ್ಲೇಡ್ ನಿಂದ ಕೊಯ್ದು, ನಂತರ ತಾನೂ ಕೊಯ್ದುಕೊಂಡಿದ್ದಾಳೆ.
ಮಗುವಿನ ಕೈ ಕೊಯ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಇದನ್ನು ಕಂಡ ಕೂಡಲೇ ಸ್ಥಳೀಯರು ಇಬ್ಬರನ್ನೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ತಾಯಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಶ್ವೇತಾ ಇತ್ತೀಚೆಗಷ್ಟೇ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಂದಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ಕೆ.ಎಸ್.ವೆಂಕಟೇಶ್ ನಾಯ್ಡು, ಸರ್ಕಲ್ ಇನ್ಸ್ಪೆಕ್ಟರ್ ಹನುಮಂತರಾಯಪ್ಪ ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ. ಮಧುಗಿರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.