ಈ ವರ್ಷ ಜುಲೈ 1ರಿಂದ ಪ್ರಸಿದ್ಧ ಅಮರನಾಥ ಯಾತ್ರೆ ಆರಂಭವಾಗಲಿದ್ದು, ಆಗಸ್ಟ್ 31 ರವರೆಗೆ ಅವಕಾಶ ನೀಡಲಾಗಿದೆ. ಅಂದರೆ ಒಟ್ಟು 62 ದಿನಗಳ ಕಾಲ ಪವಿತ್ರ ಅಮರನಾಥ ಯಾತ್ರೆ ನಡೆಯಲಿದ್ದು, ಅಲ್ಲಿನ ಜಮ್ಮು- ಕಾಶ್ಮೀರ ಸರ್ಕಾರ ಭರದ ಸಿದ್ಧತೆ ಮಾಡಿಕೊಂಡಿದೆ.
ಮುಂದಾಲೋಚನೆಯ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯರ ರಜೆಯನ್ನು ರದ್ದುಗೊಳಿಸಲಾಗಿದೆ. ಇದರೊಂದಿಗೆ ಹಲವಾರು ವಿಶೇಷ ಆದೇಶಗಳನ್ನು ಹೊರಡಿಸಲಾಗಿದೆ. ಅಮರನಾಥ ಯಾತ್ರೆಯು ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಟ್ರ್ಯಾಕ್ ಮತ್ತು ಗಂಡರ್ಬಾಲ್ ಜಿಲ್ಲೆಯ ಬಲ್ಟಾಲ್ ಎಂಬ ಎರಡು ಮಾರ್ಗಗಳಿಂದ ಪ್ರಾರಂಭವಾಗುತ್ತದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಭದ್ರತಾ ಏಜೆನ್ಸಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಅಮರನಾಥ ದೇಗುಲ ಮಂಡಳಿಯು ಭಕ್ತರಿಗೆ ಬೆಳಿಗ್ಗೆ ಮತ್ತು ಸಂಜೆಯ ಪ್ರಾರ್ಥನೆಯಲ್ಲಿ ಆನ್ಲೈನ್ ಮೂಲಕ ಭಾಗವಹಿಸಲು ನೇರ ಪ್ರಸಾರ ಮಾಡಲಾಗಿದೆ.
ಅಮರನಾಥ ಯಾತ್ರೆಯ ನೋಂದಣಿ ಪ್ರಕ್ರಿಯೆಯು ಏಪ್ರಿಲ್ 17 ರಿಂದ ಆಫ್ಲೈನ್ ಮತ್ತು ಆನ್ಲೈನ್ ಮೋಡ್ನಲ್ಲಿ ಪ್ರಾರಂಭವಾಗಿತ್ತು. ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಆಡಳಿತವು ಸಕಲ ವ್ಯವಸ್ಥೆಗಳನ್ನು ಮಾಡುತ್ತಿದೆ. ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅಮರನಾಥ ಯಾತ್ರೆಗೆ ಸಂಬಂಧಿಸಿದಂತೆ ಪೂರ್ವಸಿದ್ಧತಾ ಸಭೆಯನ್ನೂ ನಡೆಸಿದ್ದಾರೆ. ಈ ಪ್ರದೇಶದಲ್ಲಿ ಸಾಕಷ್ಟು ಪೊಲೀಸ್ ಮತ್ತು ಭದ್ರತಾ ಪಡೆಗಳ ನಿಯೋಜನೆ ಮತ್ತು ವಿವಿಧ ವಿಷಯಗಳ ಕುರಿತು ಚರ್ಚಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಮುಂಬರುವ ಅಮರನಾಥ ಯಾತ್ರೆಯನ್ನು ಸುಗಮವಾಗಿ ನಡೆಸಲು ಮಾಡಲಾಗುತ್ತಿರುವ ಸಿದ್ಧತೆಗಳ ಕುರಿತು ಶುಕ್ರವಾರ ವಿವರವಾದ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.