ವಿಜಯಪುರ: ಶಿಕ್ಷಣಕ್ಕೆ ವಯಸ್ಸಿನ ಹಂಗಿಲ್ಲ ಎನ್ನುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ 81 ವರ್ಷದ ವೃದ್ಧರೊಬ್ಬರು ಎಂಎ ಇಂಗ್ಲಿಷ್ ಪರೀಕ್ಷೆ ಬರೆದಿದ್ದಾರೆ.
ವಿಜಯಪುರ ನಗರದಲ್ಲಿನ ನರ್ಸಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ (IGNOU) ನಡೆಸಿದ ಎಂ.ಎ., ಇಂಗ್ಲಿಷ್ ಅಂತಿಮ ವರ್ಷದ ಪರೀಕ್ಷೆಯಲ್ಲಿ 81 ವರ್ಷದ ನಿಂಗಯ್ಯ ಒಡೆಯರ್ ಎಂಬುವವರು ಪರೀಕ್ಷೆ ಬರೆದಿದ್ದಾರೆ.
ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಗುಡೂರು ಬಳಿಯ ಎಸ್.ಸಿ. ಹಳ್ಳಿ ನಿವಾಸಿ ನಿಂಗಯ್ಯ ಒಡೆಯರ್ ಸರ್ಕಾರಿ ಸೇವೆಯಿಂದ ನಿವೃತ್ತರಾದ ನಂತರ ಕನ್ನಡ, ಹಿಂದಿ, ಇಂಗ್ಲಿಷ್ ವಿಷಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇಗ್ನೌದಿಂದ ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದು, ಈಗ ಮತ್ತದೇ ಮುಕ್ತ ವಿಶ್ವವಿದ್ಯಾಲಯದ ವತಿಯಿಂದ ಐದನೇ ಸ್ನಾತಕೋತ್ತರ ಪದವಿಗೆ ಪರೀಕ್ಷೆ ಎದುರಿಸಿದ್ದಾರೆ.
ನಿಂಗಯ್ಯ ಅವರಿಗೆ ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದು, ಐವರು ಮೊಮ್ಮಕ್ಕಳಿದ್ದಾರೆ. ಪುತ್ರಿ ಕೂಡ ಪಿಎಚ್‌ಡಿ ಪದವಿ ಪಡೆದಿದ್ದು, ಇವರ ಪುತ್ರರು ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.