ಝಾನ್ಸಿ: ವಿವಾಹವಾದ ನಂತರ ವಧುವಿನ ತಂದೆ ಹಾಕಿದ ಮೂರು ಷರತ್ತು ಕೇಳಿ ವರ ಬೆಚ್ಚಿ ಬಿದ್ದಿ, ಪರಾರಿಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಬಳಿಕ ವಧುವಿನ ತಂದೆ ಹಾಕಿದ ಮೂರು ಷರತ್ತು ಕೇಳಿ ವರ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾನೆ. ಕೊನೆಗೆ ಷರತ್ತುಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಮದುವೆ ಗಂಡು, ಹೆಂಡತಿ ಬೇಡವೆಂದು ಹೇಳಿ ಮನೆಗೆ ತೆರಳಿದ್ದಾನೆ. ಝಾನ್ಸಿ ಪೊಲೀಸ್ ಠಾಣಾ ವ್ಯಾಪ್ತಿಯ ಬರುವಾಸಾಗರ್ ನಗರದಲ್ಲಿ ಈ ಘಟನೆ ನಡೆದಿದೆ.
ಮನ್ವೇಂದ್ರ ಸೇನ್ ಮತ್ತು ಗುರ್ಸರಾಯ್‌ನ ಇಟೋರಾ ಗ್ರಾಮದ ಯುವತಿಯ ಮದುವೆಯು ನಡೆದಿತ್ತು. ಅದ್ದೂರಿಯಾಗಿಯೇ ವಿವಾಹ ಮಾಡಲಾಗಿತ್ತು. ಇನ್ನೇನು ವಧು-ವರರನ್ನು ಬೀಳ್ಕೊಡಬೇಕು ಎನ್ನುವಷ್ಟರಲ್ಲಿ ಹುಡುಗಿಯ ತಂದೆ ಮೂರು ಷರತ್ತು ವಿಧಿಸಿದ್ದು, ಇದನ್ನು ಕೇಳಿ ಅಲ್ಲಿದ್ದವರೆಲ್ಲ ಒಂದು ಕ್ಷಣ ಕಂಗಾಲಾಗಿ ಹೋಗಿದ್ದಾರೆ. ಮದುವೆಯ ನಂತರ, ವಧು ಮತ್ತು ವರ ದೈಹಿಕ ಸಂಬಂಧ ಮಾಡಬಾರದು. ಹುಡುಗಿಯ ತಂಗಿ ಕೂಡ ತನ್ನ ಅಕ್ಕನೊಂದಿಗೆ ಅಲ್ಲಿಯೇ ಇರುತ್ತಾಳೆ. ಮಗಳ ಮನೆಗೆ ನಾನು ಯಾವಾಗ ಬೇಕಾದರೂ ಬರಬಹುದು. ನನ್ನನ್ನು ಯಾರೂ ತಡೆಯಬಾರದು ಎಂದು ಷರತ್ತು ಹಾಕಿದ್ದಾರೆ. ಎರಡು ಹಾಗೂ ಮೂರನೇ ಷರತ್ತು ಒಪ್ಪಿಕೊಳ್ಳಬಹುದು. ಮೊದಲನೇ ಷರತ್ತಿಗೆ ಹೇಗೆ ಎಂದು ವರ ಕಂಗಾಲಾಗಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಅಲ್ಲದೇ, ಅಲ್ಲಿದ್ದವರು ಈ ವಿಚಿತ್ರ ಷರತ್ತು ಯಾಕೆ ಎಂದು ಕೇಳಿದಾಗ ವಧುವಿನ ತಂದೆ ಏನೂ ಉತ್ತರಿಸದೆ ಷರತ್ತು ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಷರತ್ತಿನ ಬಗ್ಗೆ ಎರಡೂ ಕುಟುಂಬಗಳ ನಡುವೆ ಸಾಕಷ್ಟು ಮಾತುಕತೆ ನಡೆದಿದೆ. ಅಂತಿಮವಾಗಿ ವರನ ಷರತ್ತುಗಳನ್ನು ನಿರಾಕರಿಸಿದ್ದಾನೆ. ವಧು ಕೂಡ ತನ್ನ ತಂದೆಯ ಮಾತಿಗೆ ಒಪ್ಪಿಗೆ ಸೂಚಿಸಿದ್ದಾಳೆ. ಕೊನೆಗೆ ವಧು ಇಲ್ಲದೆ ವರ ತನ್ನ ಮನೆಗೆ ಮರಳಿದ್ದಾನೆ. ವರನ ಕುಟುಂಬಸ್ಥರು ಸಾಕಷ್ಟು ಮೌಲ್ಯದ ಚಿನ್ನಾಭರಣ ವಧುವಿಗೆ ನೀಡಿದ್ದಾರೆ. ಘಟನೆಯ ಬಳಿಕ ಆಭರಣವನ್ನು ಹಿಂತಿರುಗಿಸದೆ ವಧು ತನ್ನ ತಂದೆಯೊಂದಿಗೆ ಹೋಗಿದ್ದಾಳೆ. ಈ ಕುರಿತು ವರನ ಕಡೆಯವರಿಂದ ಬರುವಸಾಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.