ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಗೆಲುವಿನ ರೂವಾರಿಗಳಾಗಿದ್ದ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಏರಿಕೆ ಕಂಡಿದ್ದಾರೆ.
ಈ ಮೂಲಕ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಅಗ್ರ ಮೂರು ಸ್ಥಾನಗಳನ್ನು ಆಸ್ಟ್ರೇಲಿಯಾ ತಂಡದ ಆಟಗಾರರು ಆಕ್ರಮಿಸಿಕೊಂಡಿದ್ದಾರೆ.
ಮಾರ್ನಸ್ ಲ್ಯಾಬುಸ್ಚಾಗ್ನೆ 903 ರೇಟಿಂಗ್ ಪಾಯಿಂಟ್‌ಗಳಿಂದ ಮೊದಲ ಸ್ಥಾನದಲ್ಲಿದ್ದರೆ, ಸ್ಟೀವ್ ಸ್ಮಿತ್ 121 ಮತ್ತು 34 ರನ್ ಗಳಿಸಿದ ನಂತರ ಒಂದು ಸ್ಥಾನ ಏರಿಕೆ ಕಂಡು ಎರಡನೇ ಸ್ಥಾನ ತಲುಪಿದ್ದಾರೆ. ಟ್ರಾವಿಸ್ ಹೆಡ್ ಅವರು 163 ಮತ್ತು 18 ರನ್ ಗಳಿಸಿದ ಬಳಿಕ ಮೂರು ಸ್ಥಾನಗಳನ್ನು ಏರಿಕೆ ಕಂಡು ವೃತ್ತಿಜೀವನದ ಅತ್ಯುತ್ತಮ 3ನೇ ಸ್ಥಾನಕ್ಕೆ ತಲುಪಿದ್ದಾರೆ.
ಸ್ಟೀವ್ ಸ್ಮಿತ್ 885 ರೇಟಿಂಗ್ ಪಾಯಿಂಟ್‌ಗಳು, ಟ್ರಾವಿಸ್ ಹೆಡ್ 884 ರೇಟಿಂಗ್ ಪಾಯಿಂಟ್‌ಗಳು ಮತ್ತು ಕೇನ್ ವಿಲಿಯಮ್ಸನ್ 883 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿರುವುದರಿಂದ ಎರಡನೇ ಸ್ಥಾನಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ.
ಒಂದೇ ತಂಡದ ಬ್ಯಾಟರ್‌ಗಳು ಮೊದಲ ಮೂರು ಶ್ರೇಯಾಂಕಗಳನ್ನು ಪಡೆದಿರುವುದು ಅಪರೂಪದ ಘಟನೆಯಾಗಿದೆ. ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಇದು ಕೊನೆಯ ಬಾರಿಗೆ 1984ರಲ್ಲಿ ಸಂಭವಿಸಿತ್ತು. ವೆಸ್ಟ್ ಇಂಡೀಸ್ ಆಟಗಾರರಾದ ಗಾರ್ಡನ್ ಗ್ರೀನಿಡ್ಜ್ (810 ರೇಟಿಂಗ್ ಅಂಕಗಳು), ಕ್ಲೈವ್ ಲಾಯ್ಡ್ (787) ಮತ್ತು ಲ್ಯಾರಿ ಗೋಮ್ಸ್ (773) ಪಟ್ಟಿಯಲ್ಲಿ ಅಗ್ರ ಮೂರು ಸ್ಥಾನ ಗಳಿಸಿದ್ದರು. ಟೆಸ್ಟ್ ರ್ಯಾಂಕಿಂಗ್ ಪಟ್ಟಿ ನೋಡುವಾದಾದರೆ
1) ಮಾರ್ನಸ್ ಲ್ಯಾಬುಸ್ಚಾಗ್ನೆ – ಆಸ್ಟ್ರೇಲಿಯಾ – 903 2) ಸ್ಟೀವ್ ಸ್ಮಿತ್ – ಆಸ್ಟ್ರೇಲಿಯಾ – 885 3) ಟ್ರಾವಿಸ್ ಹೆಡ್ – ಆಸ್ಟ್ರೇಲಿಯಾ – 884 4) ಕೇನ್ ವಿಲಿಯಮ್ಸನ್ – ನ್ಯೂಜಿಲೆಂಡ್ – 883 5) ಬಾಬರ್ ಅಜಂ – ಪಾಕಿಸ್ತಾನ – 862 6) ಜೋ ರೂಟ್ – ಇಂಗ್ಲೆಂಡ್ – 861 7) ಡೆರಿಲ್ ಮಿಚೆಲ್ – ನ್ಯೂಜಿಲೆಂಡ್ – 792 8) ದಿಮುತ್ ಕರುಣಾರತ್ನೆ – ಶ್ರೀಲಂಕಾ – 780 9) ಉಸ್ಮಾನ್ ಖವಾಜಾ – ಆಸ್ಟ್ರೇಲಿಯಾ – 777 10) ರಿಷಭ್ ಪಂತ್ – ಭಾರತ – 758