ಮಂಗಳೂರು: ಉಚಿತ ವಿದ್ಯುತ್ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. ಆದರೆ, ಇದರ ಬೆನ್ನಲ್ಲಿಯೇ ಮಂಗಳೂರಿನ (Mangaluru) ಉಳ್ಳಾಲ (Ullala)ದ ಮನೆಯೊಂದಕ್ಕೆ ಬರೋಬ್ಬರಿ 7,71,000 ರೂ. ವಿದ್ಯುತ್ ಬಿಲ್ (Electricity Bill) ನೀಡಲಾಗಿದ್ದು, ಮಾಲೀಕರು ಶಾಕ್ ಆಗಿದ್ದಾರೆ.
ಉಳ್ಳಾಲಬೈಲ್ ನಿವಾಸಿ ಸದಾಶಿವ ಆಚಾರ್ಯ ಎಂಬುವವರ ಮನೆಗೆ ಪ್ರತಿ ತಿಂಗಳು 3 ಸಾವಿರದಷ್ಟು ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ, ಮೇ ತಿಂಗಳ ಬಿಲ್ 99,338 ಯೂನಿಟ್ ವಿದ್ಯುತ್ ಖರ್ಚಾಗಿದೆ ಎಂದು ಬರೋಬ್ಬರಿ 7,71,072 ರೂ. ಕಟ್ಟಬೇಕು ಎಂದು ಬಿಲ್ ನೀಡಲಾಗಿದೆ. ಬಿಲ್ ಮೊತ್ತ ನೋಡಿ ಶಾಕ್ ಆದ ಸದಾಶಿವ ಆಚಾರ್ಯ ಅವರು ಬಿಲ್ ರೀಡರ್ ಬಳಿ ಈ ಕುರಿತು ಕೇಳಿದ್ದಾರೆ. ಆಗ ಆ ವ್ಯಕ್ತಿ ಮೆಸ್ಕಾಂ (MESCOM) ಕಚೇರಿಯಲ್ಲಿ ಕೇಳಿ ಎಂದಿದ್ದಾರೆ.
ಈ ಕುರಿತು ಮನೆಯ ಮಾಲೀಕ ಮೆಸ್ಕಾಂ ಕಚೇರಿಗೆ ದೂರು ನೀಡಿದ್ದಾರೆ. ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ತಮ್ಮ ತಪ್ಪನ್ನು ಅರಿತುಕೊಂಡು 2,833 ರೂ. ಮೌಲ್ಯದ ಪರಿಷ್ಕೃತ ಬಿಲ್ ಅನ್ನು ನೀಡಿದ್ದಾರೆ ಎಂದು ಸದಾಶಿವ ಆಚಾರ್ಯ ತಿಳಿಸಿದ್ದಾರೆ.