ಗಾಂಧಿನಗರ : ಬಿಪರ್ ಜಾಯ್ ಚಂಡಮಾರುತ (Cyclone Biparjoy) ನಿನ್ನೆ ಸಂಜೆ 6:40ರ ಸಂದರ್ಭದಲ್ಲಿ ಗುಜರಾತ್ ನ (Gujarat) ಕಛ್ ತೀರದ ಲಖಪತ್ ಹತ್ತಿರ ಅಪ್ಪಳಿಸಿದ್ದು, ಅರಬ್ಬಿ ಸಮುದ್ರದ ತೀರದಲ್ಲಿ ಆತಂಕ ಹೆಚ್ಚಾಗಿದೆ.
10 ದಿನಗಳ ಕಾಲ ಸಮುದ್ರದಲ್ಲಿ ಸಂಚರಿಸಿದ್ದ ಚಂಡಮಾರುತ ಇದೇ ಮೊದಲ ದಾರಿಗೆ ಭೂಭಾಗಕ್ಕೆ ಅಪ್ಪಳಿಸಿದೆ. ಗಂಟೆಗೆ 140 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿದ್ದರಿಂದ ವಿದ್ಯುತ್ ತಂತಿಗಳು, ಕಂಬಗಳು ಮುರಿದು ಹೋಗಿವೆ. 45ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಾಕಷ್ಟು ಸಮಸ್ಯೆಗಳೇ ಸೃಷ್ಟಿಯಾಗಿವೆ. ವಿವಿಧ ಸ್ಥಳಗಳಲ್ಲಿ 524 ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ. ಸುಮಾರು 940 ಹಳ್ಳಿಗಳಲ್ಲಿ ವಿದ್ಯುತ್ ಸಂಪೂರ್ಣವಾಗಿ ಕೈ ಕೊಟ್ಟಿದೆ.
ದ್ವಾರಕ, ಪೋರಬಂದರ್, ಜಾಮ್‍ನಗರ, ಮೋರ್ಬಿ ಸೇರಿ ಹಲವೆಡೆ ಮೂರರಿಂದ ಆರು ಮೀಟರ್ ಎತ್ತರದವರೆಗೂ ರಕ್ಕಸಗಾತ್ರದ ಅಲೆಗಳು ಏಳುತ್ತಿವೆ. ತೂಫಾನ್ ತೀವ್ರತೆಯನ್ನು ಗಮನದಲ್ಲಿರಿಸಿಕೊಂಡು ಸಮೀಪ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ದೇಗುಲಗಳು, ಕಚೇರಿಗಳು, ಶಾಲೆಗಳು ಬಂದ್ ಆಗಿವೆ. ಚಂಡಮಾರುತದ ಹಿನ್ನೆಲೆಯಲ್ಲಿ 94 ಸಾವಿರ ಜನರನ್ನು ಸ್ಥಳಾಂತರ ಮಾಡಲಾಗಿತ್ತು. 99 ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಅಲ್ಲದೇ, ಈ ಚಂಡಮಾರುತ ರಾಜಸ್ಥಾನ ಪ್ರದೇಶದ ಕಡೆ ಚಲಿಸುತ್ತಿರುವುದರಿಂದಾಗಿ ಆ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ.