ಸಾಲದ ಸುಳಿಗೆ ಸಿಲುಕಿರುವ ಪಾಕಿಸ್ತಾನಕ್ಕೆ ಚೀನಾ 7500 ಕೋಟಿ ರೂ. ಭಿಕ್ಷೆ ಹಾಕಿದೆ. ಐಎಂಎಫ್ ಬಳಿ ಬೇಡುತ್ತಿದ್ದ ಪಾಕ್ ಗೆ ಜೀವ ಸಿಕ್ಕಂತಾಗಿದೆ.
ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕ್ಗೆ ಮತ್ತೆ ಚೀನಾ ನೆರವಿನ ಹಸ್ತ ಚಾಚಿದ್ದು, ನಗದು ಕೊರತೆ ನಿವಾರಿಸಲು ಚೀನಾದಿಂದ 1 ಬಿಲಿಯನ್ ಡಾಲರ್ ಹಣ ಸಾಲ ನೆರವು ಸಿಕ್ಕಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಈ ಮಾಹಿತಿಯನ್ನು ಹೊರ ಹಾಕಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ನಿರೀಕ್ಷಿಸುತ್ತಲೇ ಇರುವ ಪಾಕಿಸ್ತಾನಕ್ಕೆ ಈಗ ಚೀನಾ ಸಹಾಯವು ಭರವಸೆ ನೀಡಿದೆ. ಈ ಕುರಿತು ಮಾತನಾಡಿರುವ ಹಣಕಾಸು ಸಚಿವ ಇಶಾಕ್ ದಾರ್, ಇತ್ತೀಚೆಗೆ ಚೀನಾಕ್ಕೆ ಮರುಪಾವತಿಸಿರುವ 1.30 ಬಿಲಿಯನ್ ಡಾಲರ್ ಹಣವನ್ನು ಚೀನಾದಿಂದ ಮರಳಿ ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ.
ಪಾಕ್ ಜೊತೆ ಸ್ನೇಹ ಸಂಬಂಧ ಕಾಪಾಡಿಕೊಳ್ಳಲು ಚೀನಾ ಏನು ಬೇಕಾದರೂ ಮಾಡುತ್ತಿದೆ. ಇದೇ ಕಾರಣಕ್ಕೆ 7500 ಕೋಟಿ ರೂ. ಸಾಲದ ಜೊತೆಗೆ ಮತ್ತೊಂದು ಆಫರ್ ನೀಡಿದೆ. ಬೀಜಿಂಗ್ ಜೊತೆ ಸಾಲದ ಜೊತೆಗೆ 2 ಬಿಲಿಯನ್ ಡಾಲರ್ ವಿನಿಮಯಕ್ಕಾಗಿಯೂ ಮಾತುಕತೆ ನಡೆಯುತ್ತಿದೆ ಎಂದು ಪಾಕಿಸ್ತಾನ ತಿಳಿಸಿದೆ. ಐಎಂಎಫ್ ಜೊತೆ ಒಪ್ಪಂದ ವಿಳಂಬದ ಪರಿಣಾಮವಾಗಿ ಪಾಕಿಸ್ತಾನ ಆರ್ಥಿಕತೆ ಸಂಕಷ್ಟ ಎದುರಿಸಿದೆ. ಸುಸ್ತಿಯಾಗುವ ಅಪಾಯದಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನಕ್ಕೆ ಐಎಂಎಫ್ ಬಿಡುಗಡೆ ಮಾಡುವ ಸಾಲ ನಿರ್ಣಾಯಕ. ಹೀಗಾಗಿ ಪರದಾಡುತ್ತಿದ್ದ ಪಾಕ್ ಸರ್ಕಾರಕ್ಕೆ ಇದೀಗ ಚೀನಾ ರಿಲೀಫ್ ಕೊಟ್ಟಿದೆ.