ರಾಜ್ಯದಲ್ಲಿ ಮುಂಗಾರು ಆರಂಭದ ಮೊದಲ ವಾರವೇ ಕೊರತೆಯಾಗಿದ್ದು, ರೈತರು ಆತಂಕ ಪಡುವಂತಾಗಿದೆ. ಈ ಅವಧಿಯಲ್ಲಿ ರಾಜ್ಯದಲ್ಲ ಶೇ. 72ರಷ್ಟು ಮಳೆ ಕೊರತೆಯಾಗಿದ್ದು, ಇದು ಕಳೆದ 28 ವರ್ಷದಲ್ಲಿ ಎದುರಾದ ಅತಿ ಹೆಚ್ಚಿನ ಮಳೆ ಕೊರತೆಯಾಗಿದೆ.
ವಾಡಿಕೆಯಂದೆ ಜೂನ್ 1ರಿಂದ 10ರೊಳಗೆ ರಾಜ್ಯದಲ್ಲಿ ಸರಾಸರಿ 51.20 ಮಿ.ಮೀ ಮಳೆಯಾಗಬೇಕು. ಆದರೆ, ಈ ಬಾರಿ ಕೇವಲ 14 ಮಿ.ಮೀ ಮಾತ್ರ ಮಳೆಯಾಗಿದೆ. ಇದು ವಾಡಿಕೆ ಪ್ರಮಾಣಕ್ಕಿಂತ ಶೇ.72ರಷ್ಟುಕಡಿಮೆ ಮಳೆಯಾಗಿದೆ. 1995ರಲ್ಲಿ ಮೊದಲ ವಾರದಲ್ಲಿ ಶೇ.74ರಷ್ಟುಮಳೆ ಕೊರತೆ ಉಂಟಾಗಿತ್ತು. ಆನಂತರ 28 ವರ್ಷದ ಬಳಿಕ ಅ ಅತಿ ಹೆಚ್ಚಿನ ಮಳೆ ಕೊರತೆಯಾದ ವರದಿಯಾಗಿದೆ. 1971ರಿಂದ 2023ರ ಅವಧಿಯ 53 ವರ್ಷದಲ್ಲಿ ಒಟ್ಟು ಮೂರು ಬಾರಿ ಶೇ.70ಕ್ಕಿಂತ ಹೆಚ್ಚಿನ ಪ್ರಮಾಣ ಮಳೆ ಕೊರತೆಯನ್ನು ರಾಜ್ಯ ಎದುರಿಸಿದೆ. 1972ರಲ್ಲಿ ಶೇ.78ರಷ್ಟು, 1995ರಲ್ಲಿ ಶೇ.74ರಷ್ಟು ಹಾಗೂ ಪ್ರಸಕ್ತ ಬಾರಿ ಶೇ.72ರಷ್ಟುಮಳೆ ಕೊರತೆಯಾಗಿದೆ. 2003ರಲ್ಲಿ ಶೇ.62ರಷ್ಟು, 2012ರಲ್ಲಿ ಶೇ.63.7ರಷ್ಟುಮಳೆ ಕೊರತೆಯಾಗಿತ್ತು. ಜೂನ್ 17ರ ವರೆಗೆ ರಾಜ್ಯದಲ್ಲಿ ವಾಡಿಕೆಯಂತೆ ಸರಾಸರಿ 102 ಮಿ.ಮೀ ಮಳೆಯಾಗಬೇಕು. ಆದರೆ, ಈ ಬಾರಿ ಕೇವಲ 29 ಮಿ.ಮೀ ಮಾತ್ರ ಮಳೆಯಾಗಿದೆ.
ರಾಜ್ಯದ 31 ಜಿಲ್ಲೆಗಳ ಪೈಕಿ ಯಾದಗಿರಿ ಒಂದೇ ಜಿಲ್ಲೆಯಲ್ಲಿ ವಾಡಿಕೆ ಪ್ರಮಾಣದ ಆಸುಪಾಸಿನಲ್ಲಿ ಮಳೆಯಾಗಿತ್ತು. ಆದರೆ, ಇದೀಗ ಎರಡನೇ ವಾರದ ಅಂತ್ಯಕ್ಕೆ ಅಲ್ಲಿಯೂ ಮಳೆ ಕೊರತೆ ಉಂಟಾಗಿದೆ. ಹೀಗಾಗಿ ರಾಜ್ಯದ ಯಾವೊಂದು ಜಿಲ್ಲೆಯಲ್ಲಿಯೂ ಸಾಮಾನ್ಯ ಪ್ರಮಾಣದಷ್ಟು ಮಳೆಯಾಗಿಲ್ಲ. ರಾಜ್ಯದ 11 ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.20ರಿಂದ ಶೇ.59ರಷ್ಟುಮಳೆ ಕೊರತೆ ಉಂಟಾಗಿದೆ. ಉಳಿದ 20 ಜಿಲ್ಲೆಗಳಲ್ಲಿ ಶೇ.66ರಿಂದ ಶೇ.99ರಷ್ಟು ಮಳೆ ಕೊರತೆ ಉಂಟಾಗಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ಜೂ.1ರಿಂದ 17 ಅವಧಿಯಲ್ಲಿ ಸರಾಸರಿ 164 ಮಿ.ಮೀ ಮಳೆಯಾಗಬೇಕು. ಆದರೆ, ಕೇವಲ 28 ಮಿ.ಮೀ ಮಳೆಯಾಗಿದೆ. ಈ ಮೂಲಕ ಶೇ.83 ರಷ್ಟುಮಳೆ ಕೊರತೆ ಉಂಟಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಸರಾಸರಿ 385 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ಕೇವಲ 88 ಮಿ.ಮೀ ಮಳೆಯಾಗಿ ಶೇ.77 ರಷ್ಟು ಮಳೆ ಕೊರತೆಯಾಗಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸರಾಸರಿ 46 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 20 ಮಿ.ಮೀ ಮಳಯಾಗಿ ಶೇ.55 ರಷ್ಟುಮಳೆ ಕೊರತೆ ಉಂಟಾಗಿದೆ. ಉತ್ತರ ಒಳನಾಡಿನಲ್ಲಿ ಸರಾಸರಿ 60 ಮಿ.ಮೀ ಮಳೆಯಾಗಬೇಕಿದ್ದು, ಕೇವಲ 19 ಮಿ.ಮೀ ಮಳೆಯಾಗಿ ಶೇ.69 ರಷ್ಟು ಕೊರತೆಯಾಗಿದೆ.