ತೆಲಂಗಾಣದಲ್ಲಿ ಇಬ್ಬರು ತೃತೀಯ ಲಿಂಗಿಗಳ ಹತ್ಯೆ ನಡೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಹೈದರಾಬಾದ್ ನ ಓಲ್ಡ್ ಸಿಟಿ ಪ್ರದೇಶದ ತಪ್ಪಚಬುತ್ರ ಪೊಲೀಸ್ ಠಾಣೆ ವ್ಯಾಪ್ತಿಯ ಡೈಬಾಗ್ ನಲ್ಲಿ ಬೆಳಿಗ್ಗೆ ಈ ಘಟನೆ ನಡೆದಿದೆ. ಯೂಸುಫ್ ಅಲಿಯಾಸ್ ಡಾಲಿ ಮತ್ತು ರಿಯಾಜ್ ಅಲಿಯಾಸ್ ಸೋಫಿಯಾ ಕೊಲೆಯಾದವರು ಎಂದು ಗುರುತಿಸಲಾಗಿದೆ.
ಬೈಕ್ ನಲ್ಲಿ ತಪ್ಪಚಬುತ್ರಾಕ್ಕೆ ಅವರ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದಾಳಿಕೊರರು ದೊಡ್ಡ ಕಲ್ಲುಗಳು ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಇಲ್ಲಿಯವರೆಗೆ ಯಾರ ವಿರುದ್ಧವೂ ಕೊಲೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಎಲ್ಲ ಕೋನಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಹೈದರಾಬಾದ್‌ನ ನೈಋತ್ಯ ಡಿಸಿಪಿ ಕಿರಣ್ ಖರೆ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ತೃತೀಯಲಿಂಗಿಯೊಬ್ಬಳ ಮನೆಯಲ್ಲಿ ಆಟೋ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ, ಇದು ಕೊಲೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದರು. ಹೀಗಾಗಿ ಆತನ ಕೊಲೆಗೂ ಇದಕ್ಕೂ ಏನಾದರೂ ಸಂಬಂಧವಿರಬಹುದು ಎಂದು ಶಂಕಿಸಲಾಗಿದೆ.