ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಸ್ವಾಮೀಜಿಯನ್ನು ವಿಶಾಖಪಟ್ಟಣಂ ನಗರದ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
15 ವರ್ಷದ ಬಾಲಕಿಯ ಮೇಲೆ ಒಂದು ವರ್ಷಕ್ಕೂ ಹೆಚ್ಚು ಕಾಲ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ವೆಂಕೋಜಿಪಾಲೆಂನಲ್ಲಿರುವ ಸ್ವಾಮಿ ಜ್ಞಾನಾನಂದ ಆಶ್ರಮ, ಅನಾಥಾಶ್ರಮ ಮತ್ತು ವೃದ್ಧಾಶ್ರಮದ ಮುಖ್ಯಸ್ಥ ಸ್ವಾಮಿ ಪೂರ್ಣಾನಂದ (64) ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸ್ವಾಮಿ ಈಗ ಎರಡನೇ ಬಾರಿಗೆ ಅತ್ಯಾಚಾರದಲ್ಲಿ ಬಂಧಿಯಾಗಿದ್ದಾನೆ. ಈ ಹಿಂದೆ 2011ರಲ್ಲಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿತ್ತು. ಪೊಲೀಸರ ಮಾಹಿತಿಯಂತೆ, ಸ್ವಾಮೀಜಿ ಎಂದು ಹೇಳಿಕೊಂಡಿದ್ದ ಈತ, ಬಾಲಕಿಯನ್ನು ಒಂದು ವರ್ಷದಿಂದ ತನ್ನು ವಶದಲ್ಲಿಟ್ಟುಕೊಂಡಿದ್ದ. ಅಲ್ಲದೇ, ಹಿಂಸಿಸುತ್ತ, ಅತ್ಯಾಚಾರ ನಡೆಸಿದ್ದಾನೆ. ಆದರೆ, ಕೆಲಸದಾಕೆಯ ಸಹಾಯದಿಂದ ಬಾಲಕಿಯು ಜೂನ್ 13ರಂದು ತಪ್ಪಿಸಿಕೊಂಡು ತಿರುಮಲ ಎಕ್ಸ್ಪ್ರೆಸ್ ಹತ್ತಿದ್ದಾಳೆ.
ನಂತರ ಸಹ ಪ್ರಯಾಣಿಕನ ಸಹಾಯದಿಂದ ವಿಜಯವಾಡದಲ್ಲಿರುವ ದಿಶಾ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣವನ್ನು ವೈಜಾಗ್ಗೆ ವರ್ಗಾಯಿಸಲಾಗಿದ್ದು, ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದೂರಿನ ಆಧಾರದ ಮೇಲೆ, ಸ್ವಾಮೀಜಿ ಮೇಲೆ ಪೋಕ್ಸೋ ಕಾಯ್ದೆಯಡಿ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

