ಹಾಸನ: ಬಾಡಿಗೆದಾರರಿಗೆ ಮನೆ ಓನರ್ ಕಿರುಕುಳ ಕೊಡೋದನ್ನ ಕೇಳಿದ್ದೇವೆ. ಆದ್ರೆ ಹಾಸನದಲ್ಲೊಂದು ಉಲ್ಟಾ ಕೇಸ್ ಆಗಿದೆ. ಬಾಡಿಗೆದಾರರ ಕಿರುಕುಳಕ್ಕೆ ಮನೆ ಒಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಹಾಸನದ ದಾಸರಕೊಪ್ಪಲಿನಲ್ಲಿ ನಡೆದಿದೆ. ಈ ವಿಷಯ ತಿಳಿದ ನಂತರ ಮನೆ ಒಡತಿಯ ತಾಯಿ ಕೂಡ ಸಾವನ್ನಪ್ಪಿದ್ದಾರೆ.
55 ವರ್ಷದ ಲಲಿತಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರು. ಈ ಸುದ್ದಿ ಕೇಳಿ 75 ವರ್ಷದ ಲಕ್ಷ್ಮಮ್ಮ ಕೂಡ ಆಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಲಲಿತಾ ಹಾಗೂ ಆಕೆಯ ಪತಿ ನಾಗರಾಜ್ ದಾಸರಕೊಪ್ಪಲಿನಲ್ಲಿ ತಮ್ಮ ವಾಸಕ್ಕೆ ಹಾಗೂ ಬಾಡಿಗೆ ಕೊಡಲು ಮನೆಗಳನ್ನ ನಿರ್ಮಿಸಿಕೊಂಡಿದ್ದರು. ಇವರು ಇದ್ದ ಮನೆಯ ಮೇಲೆ ಮನೆಗಳನ್ನು ಬಾಡಿಗೆಗೆ ಹಾಗೂ ಭೋಗ್ಯಕ್ಕೆ ನೀಡಿದ್ದರು. ಈ ವೇಳೆ ಐದು ಲಕ್ಷ ಹಣ ಪಡೆದು ಮೂರು ವರ್ಷದ ಅವಧಿಗೆ ಭೋಗ್ಯಕ್ಕೆ ಹಾಕಿದ್ದಾರೆ. ಆ ಮನೆಗೆ ಬಂದ ದಂಪತಿ ಒಂದು ವರ್ಷದ ನಂತರ ವಿನಾಕಾರಣ ಕ್ಯಾತೆ ತೆಗೆಯುತ್ತಿದ್ದರು ಎನ್ನಲಾಗಿದೆ.
ಲಲಿತಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಚಿಕ್ಕ ಪುಟ್ಟ ವಿಚಾರಕ್ಕೆ ಜಗಳ ಮಾಡುತ್ತಿದ್ದರು. ಒಮ್ಮೆ ಸರ ಕಳ್ಳತನದ ಆರೋಪ ಮಾಡಿ ಗಲಾಟೆ ಮಾಡಿದ್ದರು. ಇದರಿಂದ ಲಲಿತಾ ರೋಸಿಹೋಗಿದ್ದರು. ಇದೇ ನೋವಿನಲ್ಲಿ ಲಲಿತಾ ಮನೆ ಬಿಟ್ಟು ಹೋಗಿದ್ದಾರೆ. ಲಲಿತಾ ಅವರ ಪತಿ ಹುಡುಕಾಟ ನಡೆಸಿದಾಗ ಜೂ.17 ರಂದು ಬೆಳಗಿನ ಜಾವ ಗ್ರಾಮದ ಅವರ ಜಮೀನಿನಲ್ಲಿ ವಿಷ ಸೇವಿಸಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜೂ.20ರ ರಾತ್ರಿ ಸಾವನ್ನಪ್ಪಿದ್ದಾರೆ. ಬುಧವಾರ ಮಗಳ ಸಾವಿನ ಸುದ್ದಿ ಕೇಳಿದ ಅವರ ತಾಯಿ ಲಕ್ಷ್ಮಮ್ಮ ಕೂಡ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಹಾಸನ ಗ್ರಾಮಾಂತರ ಪೊಲೀಸ್ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.