ಸರ್ಕಾರವು ‘ಶಕ್ತಿ’ ಯೋಜನೆಯನ್ನು ಜಾರಿಗೆ ತಂದ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಆಟೋ ಚಾಲಕರ ವಹಿವಾಟಿಗೆ ಹೊಡೆತ ಬಿದ್ದಿದ್ದು, ಶೇ 20ರಷ್ಟು ವಹಿವಾಟು ಕುಸಿತವಾಗಿದೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಆಟೋ ಚಾಲಕರ ಬದುಕು ಬೀದಿಗೆ ಬಂದಂತಾಗಿದೆ.
ಸದಾ ಜನರ ಆಕ್ರೋಶಕ್ಕೆ ಗುರಿಯಾಗುತ್ತಿದ್ದ ಆಟೋ ಚಾಲಕರು ಈಗ ಸಂಕಷ್ಟ ಅನುಭವಿಸುವಂತಾಗಿದೆ. ಕರೆದ ಕಡೆ ಬರುವುದಿಲ್ಲ, ಮೀಟರ್‌ಗಿಂತ ಹೆಚ್ಚಿನ ಹಣ ವಸೂಲಿ ಸೇರಿದಂತೆ ಸದಾ ಜನರ ಆಕ್ರೋಶಕ್ಕೆ ಆಟೋದವರು ಬಲಿಯಾಗಿರುತ್ತಿದ್ದರು. ಬೈಕ್ ಟ್ಯಾಕ್ಸಿಯಿಂದಾಗಿ ನಷ್ಟದಲ್ಲಿದ್ದ ಆಟೋ ಚಾಲಕರು ಈಗ ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ.
ಬೆಂಗಳೂರು ನಗರದಲ್ಲಿ ಹೆಚ್ಚಾಗಿ ಮಹಿಳೆಯರೇ ಆಟೋದಲ್ಲಿ ಸಂಚರಿಸುತ್ತಿದ್ದರು. ಆದರೆ ಈಗ ಉಚಿತವಾಗಿ ಸಂಚಾರ ನಡೆಸಲು ಬಿಎಂಟಿಸಿ ಬಸ್ ಇರುವ ಕಾರಣ ಮಹಿಳೆಯರು ಬಸ್ ಹತ್ತುತ್ತಿದ್ದಾರೆ. ಇದರಿಂದಾಗಿ ಆಟೋ ಚಾಲಕರಿಗೆ ಹೊಡೆತ ಬಿದ್ದಿದೆ. ಬೇಕಾಬಿಟ್ಟಿಯಾಗಿ ದರ ಹೇಳುತ್ತಿದ್ದ ಚಾಲಕರು ಈಗ ಪ್ರಯಾಣಿಕರಿಗಾಗಿ ಕಾಯುವ ಪರಿಸ್ಥಿತಿ ಬಂದಿದೆ. ಪೀಕ್ ಅವರ್ ನಲ್ಲಿ ಕೂಡ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ಆದರೆ, ಆಟೋಗಳ ಬುಕ್ಕಿಂಗ್ ಕಡಿಮೆಯಾಗಿದೆ. ದೂರದ ಪ್ರದೇಶಗಳಿಗೆ ಹಿಂದೆ ಸುಲಭವಾಗಿ ಬುಕ್ಕಿಂಗ್ ಸಿಗುತ್ತಿತ್ತು. ಆದರೆ ಈಗ ಮಹಿಳೆಯರು ಬಸ್ ಅವಲಂಬಿಸಿದ್ದಾರೆ ಎನ್ನಾಗುತ್ತಿದೆ.