ಸಿಎಂ ಜೊತೆ ಮಾತನಾಡಿ ನಾನೇ ಗೃಹಲಕ್ಷ್ಮಿ (Gruhalakshmi Scheme) ಯೋಜನೆಯನ್ನು ಹೋಲ್ಡ್ ಮಾಡಿದ್ದೇನೆ . ಇದರಿಂದಾಗಿ ಗಲಾಟೆ ಕಡಿಮೆ ಮಾಡಿಸಲು ಹೀಗೆ ಮಾಡಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ (Chief Minister) ಅವರೊಂದಿಗೆ ಮಾತನಾಡಿ ಗೃಹಲಕ್ಷ್ಮಿಯನ್ನು ನಾನೇ ಸ್ವಲ್ಪ ಹೋಲ್ಡ್ ಮಾಡಿಸಿದ್ದೇನೆ. ಗಲಾಟೆ ಕಡಿಮೆ ಮಾಡಲು ಹೀಗೆ ಮಾಡಿದ್ದೇನೆ. ಮಹಿಳಾ ಸಚಿವರೊಂದಿಗೆ ಒಂದು ಸಭೆ ಮಾಡಿ, ಸರಳವಾಗಿ ಯೋಜನೆ ಅನುಷ್ಠಾನ ಮಾಡ್ತೀವಿ. ಭ್ರಷ್ಟಾಚಾರ ರಹಿತ ಯೋಜನೆ ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ.
ಅರ್ಜಿಯನ್ನು ಉಚಿತವಾಗಿ ಸಲ್ಲಿಸುವಂತೆ ಮಾಡಿಕೊಡಬೇಕು. ಸಂಘ ಸಂಸ್ಥೆಗಳು ಹಣ ವಸೂಲಿ ಮಾಡಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅವರ ಏಜೆನ್ಸಿಯನ್ನೇ ರದ್ದು ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ (BS Yediyurappa) ಅವರಿಗೆ ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ಅವಕಾಶ ಇದೆ. ಆದ್ರೆ ನಾವು ಪ್ರತಿಭಟನೆ ಮಾಡಿದಾಗ ನಮ್ಮ ಮೇಲೆ ಕೇಸ್ ಹಾಕಿರೋದನ್ನ ನೆನೆಸಿಕೊಳ್ಳಲಿ. ಅವರು ಪಕ್ಷದ ಅಧ್ಯಕ್ಷರಾಗಿದ್ದಾಗ ಅವರ ಪ್ರಣಾಳಿಕೆ ತೆಗೆದು ನೋಡಲಿ, ನಮ್ಮ ಸರ್ಕಾರ ಬಂದು ಇನ್ನೂ ಒಂದು ತಿಂಗಳು ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಕೇಂದ್ರದ ಘೋಷಣೆಗಳನ್ನು ಯಾವಾಗ ಅನುಷ್ಠಾನಕ್ಕೆ ತರುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಜನರು ನಮ್ಮ ಸರ್ಕಾರದ ಪರ ಮಾತನಾಡುತ್ತಾರೆ. ನಮ್ಮ ಅಕ್ಕ-ತಂಗಿಯರು ಬಸ್ಸಿನಲ್ಲಿ ದೇವಸ್ಥಾನ ಎಲ್ಲ ಕಡೆ ಹೋಗಿಬರುತ್ತಿದ್ದಾರೆ. ನೋಡಿ ನಮ್ಮ ಸರ್ಕಾರ ಇರುವಾಗ ಎಲ್ಲ ಮಹಿಳೆಯರು ಎಲ್ಲ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ. ಗದ್ದಲದ ಮಧ್ಯೆ ಬಸ್ ಬಾಗಿಲು ಕಿತ್ತಿದ್ದಾರೆ. ಅದನ್ನು ವ್ಯಂಗ್ಯವಾಗಿ ಮಾತನಾಡಬಾರದು ಎಂದು ಹೇಳಿದ್ದಾರೆ.