ತಮಿಳಿನ ರ‍್ಯಾಪರ್ (Rapper) ದೇವ್ ಆನಂದ್ (Dev Anand) ಅವರನ್ನು ದುಷ್ಕರ್ಮಿಗಳು ಅಪರಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ದುಷ್ಕರ್ಮಿಗಳು ಸಹೋದರನ ಸಾಲಕ್ಕಾಗಿ ಅಣ್ಣ ರ‍್ಯಾಪರ್ ದೇವ್ ಆನಂದ್‌ನನ್ನು ಅಪಹರಣ ಮಾಡಿದ್ದಾರೆ. ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ರ‍್ಯಾಪ್ ಸಾಂಗ್‌ಗಳ ಮೂಲಕ ಮೋಡಿ ಮಾಡಿದ್ದ ದೇವ್ ಆನಂದ್ ಅವರು ಇತ್ತೀಚಿಗೆ ವಿಶ್ವ ಸಂಗೀತದ ದಿನದ ಅಂಗವಾಗಿ ನಂಗಂಭಾಕ್ಕಂನ ಹೋಟೆಲ್ ನಲ್ಲಿ ನಡೆಯಬೇಕಿದ್ದ ಮ್ಯೂಸಿಕ್ ಈವೆಂಟ್‌ನಲ್ಲಿ ಭಾಗವಹಿಸಿ ಅಲ್ಲಿಂದ ತಮ್ಮ ಸ್ನೇಹಿತರಾದ ಕಲ್ಪನ್ ಗಿರೀಶ್, ಮೊಹಮ್ಮದ್ ಇಬ್ರಾಹಿಂ, ಕೆವಿನ್ ಅವರೊಟ್ಟಿಗೆ ತೆರಳುತ್ತಿದ್ದರು.
ಈ ಸಂದರ್ಭದಲ್ಲಿ ಚೆನ್ನೈ-ಬೆಂಗಳೂರು ಹೈವೇನಲ್ಲಿ ಬೈಕ್‌ನಲ್ಲಿ ವೇಗವಾಗಿ ಬಂದ ಇಬ್ಬರು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಕೂಡಲೇ ದೇವಾನಂದ್ ಹಾಗೂ ಗೆಳೆಯರು ಕಾರನ್ನು ನಿಲ್ಲಿಸಿ ಹೊರಗೆ ಬಂದು ಕಾರಿಗೆ ಏನಾಯಿತು ಎಂದು ನೋಡುತ್ತಿರುವಾಗ ಎಸ್ ಯುವಿ ಕಾರಿನಲ್ಲಿ ಬಂದ ಎಂಟು ಜನರು ಕಾರಿಗೆ ಬೈಕ್ ಗುದ್ದಿಸಿದ್ದ ಇಬ್ಬರು ಸೇರಿದಂತೆ ಚಾಕು ತೋರಿಸಿ ರ‍್ಯಾಪರ್ ಅನ್ನು ಕರೆದುಕೊಂಡು ಹೋಗಿದ್ದಾರೆ. ಆ ಕೂಡಲೇ ರ‍್ಯಾಪರ್ ದೇವಾನಂದ್ ಸ್ನೇಹಿತರು ಸ್ಥಳೀಯ ತಿರುವೇರ್ ಕಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಂತರ ರ‍್ಯಾಪರ್ ಪೋನ್ ಗೆ ಪೊಲೀಸರು ಕರೆ ಮಾಡಿದಾಗ ದೇವಾನಂದ್ ಪ್ರತಿಕ್ರಿಯಿಸಿದ್ದಾರೆ. ನನ್ನ ಸಹೋದರ ಸಿರಂಜೀವಿ ತನ್ನ ಬ್ಯುಸಿನೆಸ್‌ಗೆ ಸಂಬಂಧಿಸಿದಂತೆ ಐದು ಜನರಿಂದ 2.5 ಕೋಟಿ ಸಾಲ ಪಡೆದುಕೊಂಡಿದ್ದ ಅದೇ ಕಾರಣಕ್ಕೆ ಕೆಲವರು ನನ್ನ ಕಿಡ್ನ್ಯಾಪ್ ಮಾಡಿದ್ದಾರೆ. ಆದರೆ ನನ್ನ ಮೇಲೆ ಹಲ್ಲೆ ಮಾಡಿಲ್ಲ. ಯಾವ ಸ್ಥಳದಲ್ಲಿ ತಾನು ಇರುವುದು ತನಗೆ ತಿಳಿದಿಲ್ಲವೆಂದು ದೇವಾನಂದ್ ಹೇಳಿದ್ದಾರೆ. ಸದ್ಯ ಅವರನ್ನು ಹುಡುಕಲು ವಿಶೇಷ ತಂಡವನ್ನು ಪೊಲೀಸರು ರಚಿಸಿದ್ದಾರೆ.