ಬೆಳಗಾವಿ: ತಾಯಿಯೊಬ್ಬಳು ಮಗನನ್ನೇ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಹರಿಪ್ರಸಾದ್ ಬೋಸಲೆ(22) ಸಾವನ್ನಪ್ಪಿದ ದುರ್ದೈವ ಮಗ. ರಾಯಬಾಗ ಪಟ್ಟಣದ ನಾವಿ ಗಲ್ಲಿಯಲ್ಲಿ ಈ ಘಟನೆ ನಡೆದಿದೆ. ಮಗ ಮನೆಯಲ್ಲಿ ಮಲಗಿದಲ್ಲಿಯೇ ಸಾವನ್ನಪ್ಪಿದ್ದ. ಅನುಮಾನಗೊಂಡ ತಂದೆ ದೂರು ದಾಖಲಿಸಿದ್ದರು. ಪ್ರಕರಣ ಬೆನ್ನಟ್ಟಿದ ಪೊಲೀಸರಿಗೆ ಪರೀಕ್ಷೆ ನಂತರ ಇದು ಅಸಹಜ ಸಾವಲ್ಲ, ಕೊಲೆ ಎಂಬುವುದು ತಿಳಿದು ಬಂದಿದೆ.
ಕೊನೆಗೆ ತನಿಖೆ ಕೈಗೊಂಡಾಗ ತಾಯಿಯೇ ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಹರಿಪ್ರಸಾದ್ ನ ತಾಯಿ ಸುಧಾ ಅಲಿಯಾಸ್ ಮಾಧವಿ ಬೋಸಲೆ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನಲಾಗಿತ್ತು. ಇದಕ್ಕೆ 7 ಜನರು ಸಹಕಾರ ನೀಡಿದ್ದಾರೆ ಎಂಬುವುದು ತನಿಖೆಯಿಂದ ತಿಳಿದು ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಆರೋಪಿ ಸುಧಾ ಗಂಡನನ್ನ ಬಿಟ್ಟು ಪಾತ್ರೆ ಅಂಗಡಿ ಇಟ್ಟುಕೊಂಡು ಎರಡು ಗಂಡು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈ ಸಂದರ್ಭದಲ್ಲಿ ಕುಮಾರ್ ಬಬಲೇಶ್ವರ್ ಎಂಬಾತನ ಜತೆಗೆ ಆರೋಪಿ ಸುಧಾಗೆ ಪ್ರೇಮಾಂಕುರವಾಗಿದೆ. ಇದು ಮಗನಿಗೆ ಗೊತ್ತಾಗುತ್ತಿದ್ದಂತೆ ಜಗಳ ಮಾಡಿದ್ದಾನೆ. ಅಲ್ಲದೇ, ಸಂಬಂಧಿಕರಿಗೂ ವಿಷಯ ತಿಳಿಸಿದ್ದಾನೆ.
ಹೀಗಾಗಿ ಸಿಟ್ಟಾದ ತಾಯಿ, ಮಗನನ್ನೇ ಮುಗಿಸಲು ಸ್ಕೇಚ್ ಹಾಕಿದ್ದಳು. ಪ್ರಿಯಕರ ಕುಮಾರ್ ಜತೆಗೆ ಸೇರಿಕೊಂಡು ಮೇ.28ರಂದು ರಾತ್ರಿ ಹರಿಪ್ರಸಾದ್ ಮಲಗಿದ ಮೇಲೆ ಸುಧಾ, ಚಿಕ್ಕ ಮಗ, ಆಕೆಯ ಸಹೋದರಿ ವೈಶಾಲಿ ಮಾನೆ, ಸಹೋದರಿ ಮಗ ಗೌತಮ್ ಮಾನೆ, ಪ್ರಿಯಕರ ಕುಮಾರ್ ಬಬಲೇಶ್ವರ ಸೇರಿದಂತೆ 8 ಜನ ಕೊಲೆ ಮಾಡಿದ್ದಾರೆ. ಹರಿಪ್ರಸಾದ್ ನನ್ನು ಉಸಿರುಗಟ್ಟಿಸಿ, ಕತ್ತು ಹಿಸುಕಿ ಕೊಲೆ ಮಾಡಿ, ಎಲ್ಲರೂ ಪರಾರಿಯಾಗಿದ್ದಾರೆ.
ಆನಂತರ ಹಾರ್ಟ್ ಅಟ್ಯಾಕ್ ಆಗಿದೆ ಎಂದು ತಾಯಿ ಡ್ರಾಮಾ ಮಾಡಿದ್ದಾಳೆ. ಆದರೆ, ಆಕೆಯ ಎಲ್ಲ ವಿಷಯಗಳನ್ನು ತಿಳಿದುಕೊಂಡಿದ್ದ ಪತಿ, ಇದು ಕೊಲೆ ಎಂದು ದೂರು ನೀಡಿದ್ದರು. ಸದ್ಯ ಮಗನನ್ನೇ ಕೊಲೆ ಮಾಡಿದ ಪಾಪಿಯನ್ನು ಪೊಲೀಸರು ಜೈಲಿಗೆ ಅಟ್ಟಿದ್ದಾರೆ.