ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಕೃಷಿಯಲ್ಲಿ ಅಪಾರ ಪ್ರಮಾಣದ ನಷ್ಟ್ ಉಂಟಾಗಿದೆ. ಪರಿಣಾಮ ಮಂಗಳೂರು ಮಾರುಕಟ್ಟೆಯಲ್ಲಿ ಟೊಮೆಟೊ ದರ ಕೆಜಿಗೆ ಶತಕ ಬಾರಿಸಿದೆ. ಕಳೆದ ನಾಲ್ಕು ದಿನಗಳಿಂದ ಪ್ರತಿದಿನ ದರ ಹೆಚ್ಚುತ್ತಲೇ ಇದೆ. ಮಾರುಕಟ್ಟೆಯಲ್ಲಿ 86ರೂ. ಗೆ ಮಾರಾಟವಾದರೇ, ಚಿಲ್ಲರೆ ಅಂಗಡಿಗಳಲ್ಲಿ 90 ರಿಂದ 95 ರೂ.ಗೆ ಮಾರಾಟವಾಗಿದೆ. ಇನ್ನು ಇತರ ಮಾರುಕಟ್ಟೆಯಲ್ಲಿ 100 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚೆನ್ನೈ, ಬೆಂಗಳೂರು ಸೇರಿದಂತೆ ಮಲೆನಾಡು, ಕರಾವಳಿ ಮತ್ತಿತರ ಭಾಗದಲ್ಲಿ ಮಳೆಯಾಗುತ್ತಿದೆ. ಈ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ರಾಗಿ, ಭತ್ತ, ಅಡಿಕೆ, ಕಾಫಿ, ಮೆಣಸು ಹೀಗೆ ಬೆಳೆಯುವ ಆಹಾರಕ್ಕೆ ತೊಂದರೆಯಾಗುತ್ತಿದೆ. ತರಕಾರಿಗಳು ಕೊಳೆಯುತ್ತಿವೆ. ಇದರಿಂದಾಗಿ ಬೆಲೆ ಕೂಡ ಸಾಕಷ್ಟು ಹೆಚ್ಚಾಗುತ್ತಿವೆ. ಇದರಿಂದ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ತೊಂದರೆ ಕಟ್ಟಿಟ್ಟ ಬುತ್ತಿ.
ಪಕ್ಕದ ರಾಜ್ಯಗಳಿಂದಲೂ ತರಕಾರಿ ಬರುತ್ತಿಲ್ಲ. ಹಿಗಾಗಿ ಕೇವಲ ಟೊಮೆಟೊ ಮಾತ್ರವಲ್ಲ ಬಾಕಿ ತರಕಾರಿಗಳ ಬೆಲೆ ಕೂಡ ಹೆಚ್ಚಾಗ್ತಾನೇ ಇದೆ. ಬಾಗಲಕೋಟೆ, ಹಾವೇರಿ, ಉತ್ತರ ಕನ್ನಡ, ಗದಗ, ಬೆಳಗಾವಿ ಭಾಗದಲ್ಲಿ ಕೃಷಿ ಬೆಳೆ ಕೊಚ್ಚಿ ಹೋಗಿದೆ. ಹೀಗಾಗಿ ಟೊಮೆಟೊ ಜೊತೆಗೆ ತರಕಾರಿ ಬೆಲೆ ಕೂಡ ಹೆಚ್ಚಾಗ್ದೆ. 20ರೂ. ಗೆ ಮಾರಾಟವಾಗುತ್ತಿದ್ದ ಬೀಟ್ ರೂಟ್ ಈಗ 60 ರೂ.ಗೆ ಮಾರಾಟವಾಗುತ್ತಿದೆ. ಕ್ಯಾರೆಟ್ 100, ಬೆಂಡೆಕಾಯಿ 80, ಬೀನ್ಸ್ 80, ತೊಂಡೆಕಾಯಿ 100 ಹೀಗೆ ಪ್ರತಿಯೊಂದು ತರಕಾರಿ ಬೆಲೆ ಕೂಡ ಹೆಚ್ಚಾಗ್ತಾ ಇದೆ.