‘The Elephant Whisperers’ ಕಿರುಚಿತ್ರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಕಿರುಚಿತ್ರ ಆಸ್ಕರ್ (Oscar) ಗೆ ನಾಮಿನೇಟ್ ಆಗಿ ಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡಿದೆ. ಅನಾಥ ಆನೆ (Elephant) ಮರಿಗಳನ್ನ ಮಕ್ಕಳಂತೆ ನೋಡಿಕೊಳ್ಳುವ ದಂಪತಿ. ಮೂಕ ಪ್ರಾಣಿ ಹಾಗೂ ತಂದೆ-ತಾಯಿಯಂತೆ ನೋಡಿಕೊಳ್ಳುವ ದಂಪತಿಯ ಪ್ರೀತಿ ಬಾಂಧವ್ಯದ ಕಿರುಚಿತ್ರವಿದು. ಅದೇ ರೀತಿ ಕಾವಾಡಿ ದಂಪತಿಯೊಬ್ಬರು ಅನಾಥ ಆನೆ ಮರಿಯೊಂದನ್ನ ಸ್ವಂತ ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ರಾಂಪುರ ಆನೆ ಶಿಬಿರದ ಕಾವಾಡಿ ರಾಜು ಮತ್ತು ರಮ್ಯಾ ಆನೆ ಮರಿಯನ್ನು ಕಳೆದ ಏಳು ತಿಂಗಳಿನಿಂದ ನೋಡಿಕೊಳ್ಳುತ್ತಿದ್ದಾರೆ. ಇವರು ಈ ಆನೆ ಮರಿಯನ್ನು ತಮ್ಮ ಮೊದಲನೇ ಹೆಣ್ಣು ಮಗು ಎಂದು ಹೇಳುತ್ತಾರೆ. ಆನೆ ಮರಿಯ ಹೆಸರು ವೇದಾ. ಏಳು ತಿಂಗಳ ಹಿಂದೆ ವೇದಾ ನಗು ವಲಯದ ಅರಣ್ಯದಲ್ಲಿ ತನ್ನ ತಾಯಿಯಿಂದ ಏರ್ಪಟ್ಟಿದ್ದಳು. ಇದೀಗ ರಾಜು ಹಾಗೂ ರಮ್ಯಾ ಮಡಿಲು ಸೇರಿರುವ ವೇದಾ ಮಗುವಿನಂತೆ ದಂಪತಿಯ ಜೊತೆ ಖುಷಿಯಾಗಿ ಇದ್ದಾಳೆ.
ಈ ವೇದಾ ತನ್ನ ತಾಯಿಯಿಂದ ಬೇರ್ಪಟ್ಟಾಗ ಕೇವಲ 14 ದಿನಗಳ ಮಗು. ಈ ಮರಿಯನ್ನು ಅರಣ್ಯಾ ಇಲಾಖೆಯವರು ರಕ್ಷಿಸಿದ್ದರು. ಇಲಾಖೆಯವರೇ ರಾಜು ಹಾಗು ರಮ್ಯಾ ದಂಪತಿಗೆ 14 ದಿನಗಳ ಆನೆ ಮರಿಯನ್ನು ಒಪ್ಪಿಸಿದ್ದಾರೆ. ಇದೀಗ ಕಾವಾಡಿ ದಂಪತಿ ವೇದಾಳನ್ನು ತಮ್ಮ ಸ್ವಂತ ಮಗಳಂತೆ ನೋಡಿಕೊಳ್ಳುತ್ತಿದ್ದಾರೆ.